Wednesday, 17th July 2019

ಸೂರ್ಯನನ್ನು ಕಂಡು ಮಲೆನಾಡಿಗರಲ್ಲಿ ಹರ್ಷವೋ ಹರ್ಷ

ಚಿಕ್ಕಮಗಳೂರು: ಎರಡು ತಿಂಗಳ ಬಳಿಕ ಸೂರ್ಯನನ್ನ ನೋಡಿರೋ ಮಲೆನಾಡಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಪುನರ್ವಸು ಮಳೆ ಆರಂಭವಾದಾಗಿನಿಂದ ಪುನರ್ವಸು, ಕುಂಭದ್ರೋಣ ಹಾಗೂ ಆಶ್ಲೇಷ ಮಳೆಯ ಅಬ್ಬರಕ್ಕೆ ಮಲೆನಾಡಿಗರು ಸೂರ್ಯನನ್ನ ನೋಡಿರಲಿಲ್ಲ. ಇಂದು ಬೆಳಗ್ಗೆಯಿಂದ ಸೂರ್ಯನನ್ನ ಕಂಡು ಮಲೆನಾಡಿಗರ ಮೊಗದಲ್ಲಿ ನಗು ಮೂಡಿದೆ. ಶುಕ್ರವಾರ ಮಧ್ಯಾಹ್ನದಿಂದ ಮಳೆಯ ಪ್ರಮಾಣ ಸಂಪೂರ್ಣ ಇಳಿಮುಖವಾಗಿದ್ದು, ಮಲೆನಾಡಿಗರು ವರುಣದೇವನಿಗೆ ಉಘೇ ಎಂದಿದ್ದಾರೆ.

ಮಳೆ ನಿಲ್ಲುತ್ತಿದ್ದಂತೆ ಮಲೆನಾಡಿನಲ್ಲಿ ಭಾರೀ ಗಾಳಿ ಆರಂಭವಾಗಿದ್ದು, ಮಲೆನಾಡಿಗರು ಮತ್ತಷ್ಟು ಕಂಗಾಲಾಗಿದ್ದಾರೆ. ಈಗಾಗಲೇ ಭಾರೀ ಗಾಳಿಗೆ ಮಲೆನಾಡಿನಾದ್ಯಂತ ಬೆಟ್ಟ-ಗುಡ್ಡ ಹಾಗೂ ಬೃಹತ್ ಮರಗಳು ನೆಲಕ್ಕುರುಳುತ್ತಿವೆ. ರಣಗಾಳಿ ಮತ್ತೆ ಇನ್ಯಾವಾ ಅನಾಹುತ ಸೃಷ್ಟಿಸುತ್ತದೋ ಎಂದು ಮಲೆನಾಡಿಗರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.

ಮಳೆಯಿಂದ ಶಿರಾಡಿ, ಸಂಪಾಜೆ ಘಾಟಿ ರಸ್ತೆಗಳು ಬಂದ್ ಆದ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಎಲ್ಲಾ ವಾಹನಗಳು ಚಾರ್ಮಾಡಿಯಲ್ಲಿ ಸಂಚಾರವಾಗುತ್ತಿದೆ. ಮಂಗಳೂರು, ಧರ್ಮಸ್ಥಳಕ್ಕೆ ಸಾವಿರಾರು ಪ್ರಯಾಣಿಕರು ಸಂಚಾರ ಮಾಡುತ್ತಿದ್ದು, ದಟ್ಟ ಮಂಜು, ತುಂತುರು ಮಳೆಯಿಂದ ಪ್ರಯಾಣಿಕರು ಕಂಗಾಲಾಗಿದ್ದಾರೆ. ಮಳೆ ಬೀಳುತ್ತಿರುವುದರಿಂದ ಏಕಮುಖ ಸಂಚಾರವೂ ವಿಳಂಬವಾಗುತ್ತಿದೆ. ನೂರಾರು ವಾಹನಗಳು ರಸ್ತೆಯಲ್ಲೇ ಬಾಕಿ ಇದ್ದು, ಮಂಗಳೂರು, ಉಡುಪಿಗೆ ಬರಬೇಕಾದ ಬಸ್ಸುಗಳು 5 ಗಂಟೆ ವಿಳಂಬವಾಗಿದೆ.

ಬೆಂಗಳೂರು- ಮಂಗಳೂರು ನಡುವೆ ಏಕೈಕ ಸಂಪರ್ಕದ ಕೊಂಡಿಯಾಗಿದ್ದ ಚಾರ್ಮಾಡಿ ಘಾಟಿಯಲ್ಲಿ 10ನೇ ತಿರುವಿನಲ್ಲಿ ಶುಕ್ರವಾರ ಕಂಟೈನರ್ ಟ್ರಕ್ ಪಲ್ಟಿಯಾಗಿತ್ತು. ಪಲ್ಟಿಯಾದ ಹಿನ್ನೆಲೆಯಲ್ಲಿ ರಸ್ತೆಯ ಒಂದು ಬದಿಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *