Monday, 17th June 2019

ಆತ್ಮಹತ್ಯೆಗೆ ಶರಣಾಗಿದ್ದ ಅಭಿಮಾನಿ ಮನೆಗೆ ಸುಮಲತಾ, ಅಭಿಷೇಕ್ ಭೇಟಿ

ಮಂಡ್ಯ: ರೆಬಲ್ ಸ್ಟಾರ್ ಅಂಬರೀಶ್ ಅವರ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಅಭಿಮಾನಿ ಮನೆಗೆ ನಟಿ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಭೇಟಿ ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಟ್ಟೇಗೌಡನದೊಡ್ಡಿ ಗ್ರಾಮದ ತಮ್ಮಯ್ಯ ಆತ್ಮಹತ್ಯೆಗೆ ಶರಣಾಗಿದ್ದರು. ತಮ್ಮಯ್ಯ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ವಿಷಯ ತಿಳಿದ ಸುಮಲತಾ ಅವರು ಇಂದು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಿದ್ದರು.

ಸುಮಲತಾ ಅವರು ತಮ್ಮಯ್ಯ ಮನೆಯವರಿಗೆ ಹೆದರಬೇಡಿ. ಕಷ್ಟ ಇದ್ದರೆ ನಮ್ಮನ್ನು ಭೇಟಿ ಮಾಡಿ. ನಿಮ್ಮ ಜೊತೆ ನಾವಿರುತ್ತೇವೆ ಎಂದು ಸಾಂತ್ವನ ಹೇಳಿ 30 ಸಾವಿರ ರೂ. ಪರಿಹಾರ ಚೆಕ್ ವಿತರಿಸಿದ್ದಾರೆ. ಇದೇ ವೇಳೆ ಸುಮಲತಾ ಅವರಿಗೆ ಹಿರಿಯ ನಟ ದೊಡ್ಡಣ್ಣ ಹಾಗೂ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸಾಥ್ ನೀಡಿದ್ದರು.

ಅಲ್ಲದೇ ಸುಮಲತಾ ಹಾಗೂ ಅಭಿಷೇಕ್ ಅವರು ಮದ್ದೂರು ತಾಲೂಕಿನ ಗೊರವನ ಹಳ್ಳಿ ಗ್ರಾಮಕ್ಕೂ ಭೇಟಿ ನೀಡಿದ್ದಾರೆ. ಗೊರವನ ಹಳ್ಳಿಯ ಅಂಬಿ ಅಭಿಮಾನಿ ಸುರೇಂದ್ರ(50) ನೇಣಿಗೆ ಶರಣಾಗಿದ್ದರು. ಸುಮಲತಾ ಹಾಗೂ ಅಭಿಷೇಕ್ ಸುರೇಂದ್ರ ಅವರ ಕುಟುಂಬಕ್ಕೂ ಸಾಂತ್ವನ ಹೇಳಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಗಳ ಕುಟುಂಬಸ್ಥರಿಗೆ ಅದನ್ನು ಭರಿಸುವ ಶಕ್ತಿ ನೀಡಲಿ ಎಂದು ಸುಮಲತಾ ಗೊರವನ ಹಳ್ಳಿಯಲ್ಲಿ ಹೇಳಿದ್ದಾರೆ. ಅವರ ಸಾವು ದೈವ ಇಚ್ಚೆ. ಆದರೆ ಇಲ್ಲಿ ಆಗ ಬಾರದಿತ್ತು. ನಮ್ಮ ಕೈಯಲ್ಲಿ ಸಾಂತ್ವನ ಹೇಳಲಿಕ್ಕಷ್ಟೆ ಆಗುವುದು ಎಂದು ಸುಮಲತಾ ಅವರು ಅಂಬಿಯನ್ನು ನೆನೆದು ಗದ್ಗದಿತರಾದರು.

ಸುಮಲತಾ, ಅಭಿಷೇಕ್, ದೊಡ್ಡಣ್ಣ ಹಾಗೂ ರಾಕ್ ಲೈನ್ ವೆಂಕಟೇಶ್ ಅವರು ಮೃತ ಸುರೇಶ್ ಮನೆಯಲ್ಲಿ ಎಳನೀರು ಕುಡಿದು ಕುಟುಂಬಸ್ಥರ ಜೊತೆ ಸ್ವಲ್ಪ ಸಮಯ ಕಳೆದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *