Tuesday, 15th October 2019

Recent News

ಭವಿಷ್ಯದ ರಾಜಕಾರಣಕ್ಕಾಗಿ ‘ಕೈ’ ಹಿಡಿಯುತ್ತಾರಾ ನೂತನ ಸಂಸದೆ ಸುಮಲತಾ?

ಮಂಡ್ಯ: ಮಾಜಿ ಸಚಿವ ಚಲುವರಾಯಸ್ವಾಮಿ ಹುಟ್ಟು ಹಬ್ಬಕ್ಕೆ ಶುಭಕೋರಿ ಮಂಡ್ಯ ನಗರದಲ್ಲಿ ಹಾಕಲಾಗಿರುವ ಫ್ಲೆಕ್ಸ್‍ಗಳಲ್ಲಿ ಸುಮಲತಾ ಫೋಟೋ ರಾರಾಜಿಸುತ್ತಿದ್ದು, ಕಳೆದ ಲೋಕಸಭೆ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಸುಮಲತಾ ಪರ ಪ್ರಚಾರ ಮಾಡಿದ್ದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಚರ್ಚೆ ಮತ್ತೆ ಜಿಲ್ಲೆಯಲ್ಲಿ ಜೋರಾಗಿ ಕೇಳಿ ಬರುತ್ತಿದೆ.

ಇಂದು ಚಲುವರಾಯಸ್ವಾಮಿ ಹುಟ್ಟು ಹಬ್ಬದ ಪ್ರಯುಕ್ತ ಮಂಡ್ಯ ನಗರದ ಹಲವೆಡೆ ಶುಭಕೋರಿ ಫ್ಲೆಕ್ಸ್ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಸುಮಲತಾ ಅವರು ತಮ್ಮ ಭವಿಷ್ಯದ ರಾಜಕೀಯ ದೃಷ್ಟಿಯಿಂದ ಕಾಂಗ್ರೆಸ್ ಕೈ ಹಿಡಿಯಲಿದ್ದಾರಾ ಎಂಬ ಚರ್ಚೆ ಕೂಡ ಶುರುವಾಗಿದೆ.

ಮಾಜಿ ಸಚಿವ ಸಲುವರಾಯಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಕೋರಿ ಹಾಕಲಾಗಿರುವ ಫ್ಲೆಕ್ಸ್ ಗಳಲ್ಲಿ ಚುನಾವಣೆಯಲ್ಲಿ ಸುಮಲತಾ ಪರ ಪ್ರಚಾರ ನಡೆಸಿ ಕಾಂಗ್ರೆಸ್‍ನಿಂದ ಉಚ್ಚಾಟನೆಗೊಂಡ ಮುಖಂಡರೇ ಪ್ರಮುಖರಾಗಿದ್ದಾರೆ. ಪ್ರಮುಖವಾಗಿ ಕಾಂಗ್ರೆಸ್ ಉಚ್ಚಾಟಿತ ಕೆಪಿಸಿಸಿ ಸದಸ್ಯ ಇಂಡುವಾಳು ಸಚ್ಚಿದಾನಂದ, ಮಾಜಿ ಶಾಸಕ ಎಚ್.ಬಿ.ರಾಮು ಹಲವರ ಫೋಟೋ ಹಾಕಲಾಗಿದೆ.

ಇದರೊಂದಿಗೆ ಫ್ಲೆಕ್ಸ್ ಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿಕೆ.ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರ ಜೊತೆ ಸುಮಲತಾ ಫೋಟೊ ಕೂಡ ಇದೆ. ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಇದ್ದರೂ ಮುಂಬರುವ ದಿನಗಳಲ್ಲಿ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಮತ್ತೆ ಮಂಡ್ಯದಲ್ಲಿ ಕೈ ಸೇರ್ಪಡೆಯಾಗುವದು ಅನುಮಾನವಿಲ್ಲ. ಇದಕ್ಕೆ ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ಗಳಲ್ಲಿ ಸುಮಲತಾ ರಾರಾಜಿಸುತ್ತಿರುವುದೇ ಸಾಕ್ಷಿಯಾಗಿದೆ ಎಂಬ ಮಾತು ಕ್ಷೇತ್ರದ ರಾಜಕೀಯ ವಲಯದಿಂದ ಕೇಳಿ ಬಂದಿದೆ.

ಇತ್ತ ಸುಮಲತಾ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಚಲುವರಾಯಸ್ವಾಮಿ ಅವರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುವುದು ಬಿಡುವುದು ಅವರ ವೈಯಕ್ತಿಕ ವಿಚಾರ. ಈ ಬಗ್ಗೆ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದು, ಮಂಡ್ಯ ಜನರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಹೇಳಿದ್ದಾರೆ. ಜನರು ಏನು ಹೇಳುತ್ತಾರೆ ಅದನ್ನೇ ಅವರು ತೀರ್ಮಾನಿಸುತ್ತಾರೆ ಎಂದರು.

Leave a Reply

Your email address will not be published. Required fields are marked *