Districts
ಆತ್ಮನಿರ್ಭರ ಭಾರತದ ಬಗ್ಗೆ ಕಾಂಗ್ರೆಸ್ಗೆ ಅರಿವಿಲ್ಲ -ಡಾ. ಸುಧಾಕರ್

ಚಿಕ್ಕಬಳ್ಳಾಪುರ: ಕಾಂಗ್ರೆಸ್ ನವರು ಆಮದಿನ ವ್ಯವಸ್ಥೆಯಲ್ಲೇ ಇದ್ದಾರೆ. ಆತ್ಮನಿರ್ಭರ ಭಾರತದ ಬಗ್ಗೆ ಕಾಂಗ್ರೆಸ್ ನವರಿಗೆ ಅರಿವಿಲ್ಲ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ನಗರದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಕೇಂದ್ರ ಸರ್ಕಾರದ ಬಜೆಟ್ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ. ಸುಧಾಕರ್, ಕೇಂದ್ರ ಸರ್ಕಾರ ಕೋವಿಡ್ ಸಂಕಷ್ಟದ ನಡುವೆಯೂ ಅತ್ಯುತ್ತಮ ಬಜೆಟ್ ಮಂಡನೆ ಮಾಡಿದೆ. ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರು ಈ ಸಂದರ್ಭದಲ್ಲಿ ಸಾಮಾನ್ಯ ಜನರ ಮೇಲೆ ತೆರಿಗೆ ಹೊರೆಯ ಭಾರ ಹಾಕುವುದು ಅನಿವಾರ್ಯವಾಗಿತ್ತು. ಆದರೆ ನಮ್ಮ ಸರ್ಕಾರ ಜನರಿಗೆ ಹೊರೆಯಾಗದಂತೆ ಉತ್ತಮ ಆಯವ್ಯಯ ಮಂಡಿಸಿದ್ದು, ಇದೊಂದು ದೂರದೃಷ್ಠಿ ಹೊಂದಿರುವ ಐತಿಹಾಸಿಕವಾದ ಬಜೆಟ್ ಎಂದು ಬಣ್ಣಿಸಿದರು.
ಇದೇ ವೇಳೆ ಬಜೆಟ್ ಗೆ ಟೀಕೆ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸುಧಾಕರ್, ಕಾಂಗ್ರೆಸ್ ನವರಿಗೆ ಆತ್ಮ ನಿರ್ಭರ ಭಾರತದ ಬಗ್ಗೆ ಗೊತ್ತಿಲ್ಲ, ಅವರೆಲ್ಲಾ ಆಮದಿನ ಗುಂಗಿನಲ್ಲೇ ಇದ್ದಾರೆ. ಕಾಂಗ್ರೆಸ್ ಸರ್ಕಾರ ಗಾಂಧಿ ತತ್ವಗಳನ್ನ ಪಾಲನೆ ಮಾಡಿದ್ಯಾ? ಯುಪಿಎ ಸರ್ಕಾರ ರೈತರ ಆದಾಯ ದ್ವಿಗುಣ ಮಾಡಲು ಕೆಲಸ ಮಾಡಿತ್ತಾ ಎಂದು ಪ್ರಶ್ನೆ ಮಾಡಿ, ರಾಜಕೀಯವೆಂದು ಬೇಕಾಬಿಟ್ಟಿ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ. ಜನ ಹಾಗೂ ರೈತರ ಹಿತ ಕಾಪಾಡಲು ಕಾಂಗ್ರೆಸ್ ವಿಫಲವಾಗಿದೆ ಎಂದು ಟೀಕಿಸಿದರು.
