Saturday, 16th February 2019

Recent News

ಕಾಲೇಜಿಗೆ ಹೋಗಿದ್ದ ವಿದ್ಯಾರ್ಥಿನಿ ನಾಪತ್ತೆ- ಅರೆಬರೆ ಬೆಂದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಹಾವೇರಿ: ಅರೆಬೆರೆ ಬೆಂದ ಸ್ಥಿತಿಯಲ್ಲಿ ಕಾಲೇಜು ವಿದ್ಯಾರ್ಥಿನಿಯ ಶವ ಹಾವೇರಿ ತಾಲೂಕಿನ ವರದಹಳ್ಳಿ ಬ್ರೀಡ್ಜ್ ಬಳಿ ಪತ್ತೆಯಾಗಿದೆ.

ಮೃತ ವಿದ್ಯಾರ್ಥಿಯನ್ನ ಜಿಲ್ಲೆಯ ಸವಣೂರು ತಾಲೂಕಿನ ಮಣ್ಣೂರು ಗ್ರಾಮದ ನಿವಾಸಿ ರೇಣುಕಾ ಪಾಟೀಲ(17) ಎಂದು ಗುರುತಿಸಲಾಗಿದೆ. ಹಾವೇರಿ ನಗರದ ಜಿ.ಎಚ್.ಕಾಲೇಜಿನಲ್ಲಿ ದ್ವಿತೀಯ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ವಿದ್ಯಾರ್ಥಿನಿಯನ್ನ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿ ಅರ್ಧಂಬರ್ದ ಸುಟ್ಟು ಹಾಕಿ ಹೋಗಿದ್ದಾರೆ ಎನ್ನಲಾಗಿದೆ.

ಏನಿದು ಪ್ರಕರಣ?
ಮೃತ ರೇಣುಕಾ ಪಾಟೀಲ ಆಗಸ್ಟ್ 6ರಂದು ಎಂದಿನಂತೆ ಕಾಲೇಜಿಗೆ ಹೋಗಿದ್ದಳು. ಆದರೆ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ನಂತರ ಪೋಷಕರು ಮಗಳು ಮನೆಗೆ ಬಂದಿಲ್ಲ ಎಂದು ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ರೇಣುಕಾಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಗುರುವಾರ ವರದಹಳ್ಳಿ ಗ್ರಾಮದ ಬಳಿಯ ಬ್ರಿಡ್ಜ್ ಬಳಿ ರೇಣುಕಾಳ ಶವ ಪತ್ತೆಯಾಗಿದೆ. ಯಾರೋ ದುಷ್ಕರ್ಮಿಗಳು ರೇಣುಕಾಳನ್ನ ಹತ್ಯೆ ಮಾಡಿ ಅರ್ಧಂಬರ್ದ ಸುಟ್ಟು ಪರಾರಿ ಆಗಿದ್ದಾರೆ. ರೇಣುಕಾಳ ಶವದ ಸ್ಥಿತಿ ನೋಡಿದರೆ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನ ಹತ್ಯೆ ಮಾಡಿ ಸುಟ್ಟುಹಾಕಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಎಸ್‍ಪಿ ಕೆ.ಪರಶುರಾಮ, ಡಿವೈಎಸ್ಪಿ ಕುಮಾರಪ್ಪ ಹಾಗೂ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಸ್ಥಳದಲ್ಲಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ.

ಕಾಲೇಜಿಗೆ ಹೋದವಳು ಶವವಾಗಿ ಪತ್ತೆಯಾಗಿದ್ದು, ಮೃತಳ ಸಂಬಂಧಿಕರನ್ನ ಆತಂಕಕ್ಕೆ ಸಿಲುಕಿಸಿದ್ದು, ಸೂಕ್ತ ತನಿಖೆ ನಡೆಸಿ ಶಿಕ್ಷೆ ಆಗಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Leave a Reply

Your email address will not be published. Required fields are marked *