Connect with us

Bengaluru City

ಮಹಾರಾಷ್ಟ್ರದ ಚುನಾವಣೆ ಫಲಿತಾಂಶದ ಮೇಲೆ ನಿಂತಿದೆ ರಾಜ್ಯದ ರಾಜಕೀಯ ಭವಿಷ್ಯ

Published

on

ಬೆಂಗಳೂರು: ನೆರೆಯ ಮಹಾರಾಷ್ಟ್ರದಲ್ಲಿ ಫೆಬ್ರವರಿಯಲ್ಲಿ ನಡೆಯುವ ಚುನಾವಣೆ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ಭವಿಷ್ಯವನ್ನು ನಿರ್ಧರಿಸುತ್ತೆ ಎನ್ನಲಾಗುತ್ತಿದ್ದು, ರಾಜ್ಯದಲ್ಲಿ ಯಾವ ಕ್ಷಣದಲ್ಲಿ ಬೇಕಾದರು ಚುನಾವಣೆ ನಡೆಯಬಹುದು ಅನ್ನೋ ವಿಪಕ್ಷಗಳ ಮಾತು ನಿಜವಾಗುತ್ತೆ ಎಂಬ ಅನುಮಾನಗಳು ಶುರುವಾಗಿದೆ.

ನೆರೆಯ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಗೆಲುವು ಸಾಧಿಸಿದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರು ಕರ್ನಾಟಕವನ್ನ ಟಾರ್ಗೆಟ್ ಮಾಡಲಿದ್ದಾರೆ. ಕೇಂದ್ರದಂತೆ ರಾಜ್ಯದಲ್ಲಿ ಕೂಡ ಸ್ಪಷ್ಟ ಬಹುಮತದ ಬಿಜೆಪಿ ಸರ್ಕಾರವನ್ನು ರಚಿಸಲು ಬಿಜೆಪಿ ಹೈಕಮಾಂಡ್ ಯೋಚಿಸಿದೆ ಎನ್ನಲಾಗಿದೆ. ಆದ್ದರಿಂದ ಮಹಾರಾಷ್ಟ್ರದಲ್ಲಿ ನಡೆಯುವ ಚುನಾವಣೆ ಫಲಿತಾಂಶದ ಮೇಲೆ ಕರ್ನಾಟಕದ ಮಧ್ಯಂತರ ಚುನಾವಣೆ ಭವಿಷ್ಯ ನಿರ್ಧಾರವಾಗುತ್ತದೆ. ಸ್ವತಃ ಬಿಜೆಪಿ ನಾಯಕರುಗಳೇ ಚುನಾವಣೆಗೆ ತೆರೆ ಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

ಫೆಬ್ರವರಿಯಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯಲಿದೆ. ಆದ್ದರಿಂದ ಇನ್ನು 6 ತಿಂಗಳಿಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯೋದು ಗ್ಯಾರಂಟಿನಾ? ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರೋಧದ ನಡುವೆಯು ಬಿಜೆಪಿಯಲ್ಲಿ ಚುನಾವಣಾ ಸಿದ್ಧತೆ ಆರಂಭವಾಗಿದೆಯಾ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮೋದಿ, ಶಾ ಅವರ ಈ ಲೆಕ್ಕಾಚಾರಕ್ಕೆ ರಾಜ್ಯ ಬಿಜೆಪಿಯ ಕೆಲವು ನಾಯಕರು ಸಹ ಸಮ್ಮತಿ ಸೂಚಿಸಿದ್ದಾರೆ. ಆದರೆ ಸಿಎಂ ಯಡಿಯೂರಪ್ಪ ಮಾತ್ರ ಚುನಾವಣೆಯ ಬಗ್ಗೆ ಮಾತನಾಡದೆ ಸರ್ಕಾರ ಉಳಿಸಿಕೊಂಡು ಹೋಗುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಮೇಲೆ ರಾಜ್ಯ ರಾಜಕಾರಣದ ಭವಿಷ್ಯವು ನಿರ್ಧಾರವಾಗಲಿದೆ. ಈ ಮೂಲಕ ಕೇಂದ್ರ ಬಿಜೆಪಿ ನಾಯಕರ ಚುನಾವಣಾ ಆಸಕ್ತಿ ರಾಜ್ಯ ರಾಜಕಾರಣದಲ್ಲಿ ಇನ್ನೊಂದು ಸುತ್ತಿನ ರಾಜಕೀಯ ಜಿದ್ದಾ ಜಿದ್ದಿಗೆ ವೇದಿಕೆ ಸೃಷ್ಟಿಸಿ ಕೊಡುವ ಸಾಧ್ಯತೆ ಕಂಡುಬರುತ್ತಿದೆ.