Friday, 15th November 2019

Recent News

ಹನುಮಂತ ಹುಟ್ಟಿದ ಸ್ಥಳ ಎನ್ನಲಾದ ಅಂಜನಾದ್ರಿ ಬೆಟ್ಟ ಸರ್ಕಾರದ ವಶಕ್ಕೆ!

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ಪೂಜೆಯ ಹಕ್ಕಿನ ವಿವಾದ ನಡೆದ ಬೆನ್ನಲ್ಲೇ ಡಿಸಿಯವರು ದೇವಸ್ಥಾನವನ್ನು ಸರ್ಕಾರದ ವಶಕ್ಕೆ ಪಡೆದಿದ್ದಾರೆ.

ಹನುಮಂತ ಹುಟ್ಟಿದ ಸ್ಥಳ ಎನ್ನಲಾದ ಅಂಜನಾದ್ರಿ ಬೆಟ್ಟವನ್ನು ಮುಜರಾಯಿ ಇಲಾಖೆಗೆ ಪಡೆದುಕೊಳ್ಳುವಂತೆ ಡಿಸಿ ಆದೇಶಿಸಿದ್ದಾರೆ. ಕಳೆದ ಎರಡು ವರ್ಷದಿಂದ ಪೂಜೆಯ ವಿವಾದಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಅರ್ಚಕ ವಿದ್ಯಾದಾಸ ಬಾಬಾ ಹಾಗೂ ಸ್ಥಳೀಯ ಆಡಳಿತ ಮಂಡಳಿ ನಡುವೆ ಭಿನ್ನಾಭಿಪ್ರಾಯ ತಲೆದೂರಿತ್ತು. ಈ ಕಾರಣಕ್ಕೆ ಕೊಪ್ಪಳ ಡಿಸಿ ಎಂ. ಕನಗವಲ್ಲಿಯವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಅಲ್ಲದೇ ಕಳೆದ 2016 ಮತ್ತು 2018 ರಲ್ಲಿ ಉಂಟಾಗಿದ್ದ ವಿವಾದದಿಂದಾಗಿ ಬೆಟ್ಟದಲ್ಲಿ ಕೋಮು-ಗಲಭೆ ಘರ್ಷಣೆಗಳು ನಡೆದಿದ್ದವು. ಈ ಹಿನ್ನೆಲೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಿದ್ದು, ಬೆಟ್ಟವನ್ನು ಸರ್ಕಾರದ ಸುಪರ್ದಿಗೆ ಪಡೆಯುವುದು ಸೂಕ್ತ ಎಂದು ಜಿಲ್ಲಾಧಿಕಾರಿಗೆ ಎಸ್ಪಿ ಅನೂಪ್ ಶೆಟ್ಟಿ ವರದಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಮಾಡಿ ದೇವಸ್ಥಾನವನ್ನು ವಶಕ್ಕೆ ಪಡೆಯುವಂತೆ ತಹಸೀಲ್ದಾರ್ ಚಂದ್ರಕಾಂತ್ ಅವರಿಗೆ ಡಿಸಿ ಎಂ. ಕನಗವಲ್ಲಿ ಆದೇಶಿಸಿದ್ದಾರೆ. ಅಲ್ಲದೇ ದೇವಸ್ಥಾನಕ್ಕೆ ಆಡಳಿತಾಧಿಕಾರಿಯನ್ನಾಗಿ ಹುಲುಗಿ ದೇವಸ್ಥಾನದ ಸಿ.ಎಚ್. ಚಂದ್ರಮೌಳಿ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಆಂಜನೇಯನ ಜನ್ಮಸ್ಥಳವಾದ ಈ ಪುಣ್ಯಕ್ಷೇತ್ರಕ್ಕೆ ಉತ್ತರ ಭಾರತದ ಸಾವಿರಾರು ಭಕ್ತರು ದಿನಂಪ್ರತಿ ಆಗಮಿಸುತ್ತಿರುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾ ಬೆನ್ ಕೂಡ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದರು.

Leave a Reply

Your email address will not be published. Required fields are marked *