Connect with us

Chikkamagaluru

ಕಾಫಿನಾಡಿನ ರಣಬಿಸಿಲಿಗೆ ನಿತ್ರಾಣಗೊಂಡಿದ್ದ ಹದ್ದು ರಕ್ಷಣೆ

Published

on

ಚಿಕ್ಕಮಗಳೂರು: ರಣಬಿಸಿಲಿಗೆ ನಿತ್ರಾಣಗೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ರಣಹದ್ದಿಗೆ 16 ರೂಪಾಯಿಯ ಔಷಧಿ ನೀಡುತ್ತಿದ್ದಂತೆ ಮುಗಿಲೆತ್ತರಕ್ಕೆ ಹಾರಿರುವಂತ ಘಟನೆ ನಗರದ ಭೋಳರಾಮೇಶ್ವರ ದೇವಾಲಯದ ಆವರಣದಲ್ಲಿ ನಡೆದಿದೆ.

ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರೋ ಬೆಸುಗೆ ಮೂರ್ತಿ ಭವನದ ಮುಂಭಾಗವಿರೋ ಮರದಲ್ಲಿದ್ದ ರಣಹದ್ದು ಆಹಾರದ ವ್ಯತ್ಯಯದಿಂದ ನೀರಿಲ್ಲದೇ ನಿತ್ರಾಣಗೊಂಡು ಭವನದ ಮುಂದೆ ಬಿದ್ದಿತ್ತು. ಇದನ್ನ ಗಮನಿಸಿದ ಸ್ಥಳೀಯರು ಹದ್ದನ್ನ ನೆರಳಿನಲ್ಲಿ ಬಿಟ್ಟು ನೀರು ಕುಡಿಸಿ ಸುಮಾರು ಅರ್ಧ ಗಂಟೆಗಳ ಕಾಲ ಆರೈಕೆ ಮಾಡಿದ್ದಾರೆ. ಆದರೆ ಇದರಿಂದ ಪ್ರಯೋಜನವಾಗದ ಕಾರಣ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಚಿಕಿತ್ಸೆಗಾಗಿ ಹದ್ದನ್ನು ಕರೆದೊಯ್ಯುತ್ತಿದ್ದನ್ನು ಗಮನಿಸಿದ ಅರಣ್ಯ ಇಲಾಖೆ ಜೀಪ್ ಚಾಲಕ ಪ್ರಾಣಿ, ಪಕ್ಷಿಗಳಿಗೆ ನಿತ್ರಾಣವನ್ನು ಕಡಿಮೆ ಮಾಡುವ ಡ್ರಾಪ್ಸ್ ತಂದು ನೀಡಿದ್ದಾರೆ. ಡ್ರಾಪ್ಸ್ ಹಾಕಿದ ಅರ್ಧಗಂಟೆಯಲ್ಲಿ ಹದ್ದು ಸುಧಾರಿಸಿಕೊಂಡು ರೆಕ್ಕೆ ಅಗಲಿಸಿ ಮುಗಿಲಿನತ್ತ ಹಾರಿ ಹೋಗಿದೆ. ಕೂಲ್ ಸಿಟಿ ಕಾಫಿನಾಡಿನ ಹಾಟ್ ಸ್ಥಿತಿಗೆ ಜನಸಾಮಾನ್ಯರೇ ತತ್ತರಿಸಿ ಹೋಗುತ್ತಿದ್ದು, ನೀರಿಗಾಗಿ ಮೂಕಪ್ರಾಣಿಗಳು ಕೂಡ ಸಮಸ್ಯೆಗಳನ್ನು ಎದುರಿಸುತ್ತಿವೆ. ಸದ್ಯ ಘಟನೆಯಿಂದ ಪ್ರೇರಣೆ ಪಡೆದ ಸ್ಥಳೀಯರು ಮನೆ ಮೇಲೆ ಹಕ್ಕಿಗಳಿಗೆ ನೀರಿಡುವ ನಿರ್ಧಾರ ಮಾಡಿದ್ದಾರೆ.