Connect with us

Cinema

ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ- ಆರ್‌ಆರ್‌ಆರ್‌ ಗುಟ್ಟು ಬಿಚ್ಚಿಟ್ಟ ರಾಜಮೌಳಿ

Published

on

ಹೈದರಾಬಾದ್: ಯುಗಾದಿ ಹಬ್ಬಕ್ಕೆ ನಿರ್ದೇಶಕ ರಾಜಮೌಳಿ ಅವರು ಉಡುಗೊರೆ ನೀಡಿದ್ದು, ಅವರ ಬಹುನಿರೀಕ್ಷಿತ ಆರ್‌ಆರ್‌ಆರ್‌ ಚಿತ್ರದ ಕುರಿತು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಕೊರೊನಾ ಗೊಂದಲದ ನಡುವೆಯು ಚಿತ್ರತಂಡ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ನೀಡಿದೆ.

ಭಾರತೀಯ ಚಿತ್ರರಂಗದಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ಆರ್‌ಆರ್‌ಆರ್‌ ಸಿನಿಮಾದ ಮೋಷನ್ ಪೋಸ್ಟರ್ ನ್ನು ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಬಿಡುಗಡೆ ಮಾಡಿದ್ದು, ಇದರ ಜೊತೆಗೆ ಆರ್‌ಆರ್‌ಆರ್‌ ಟೈಟಲ್‍ನ ಗುಟ್ಟನ್ನೂ ಬಿಟ್ಟುಕೊಟ್ಟಿದ್ದಾರೆ. ಸಿನಿಮಾದ ಹೆಸರು ಘೋಷಣೆ ಆದ ದಿನದಿಂದಲೂ ‘ಆರ್‍ಆರ್‍ಆರ್’ ಎಂದು ಹೇಳಿದ್ದು ಬಿಟ್ಟರೆ, ಪೂರ್ಣ ಟೈಟಲ್ ಏನೆಂದು ನಿರ್ದೇಶಕರು ತಿಳಿಸಿರಲಿಲ್ಲ. ಇದೀಗ ಇದನ್ನು ರಿವೀಲ್ ಮಾಡಿದ್ದಾರೆ. ಈ ಮೂಲಕ ಹಲವರ ಊಹೆಯನ್ನು ಸುಳ್ಳಾಗಿಸಿದ್ದಾರೆ.

ಈ ಚಿತ್ರದಷ್ಟೇ ಕುತೂಹಲ ಟೈಟಲ್ ಕುರಿತು ಸಹ ಮೂಡಿತ್ತು. ಆದರೆ ರಾಜಮೌಳಿ ‘ಆರ್‌ಆರ್‌ಆರ್‌’ ಅಂತಲೇ ಕೆಲಸ ಶುರು ಮಾಡಿದರು. ನಂತರ ಕೆಲವರು ‘ರಘುಪತಿ ರಾಘವ ರಾಜಾರಾಮ್’ ಎಂದರು, ಇನ್ನೂ ಕೆಲವರು ರಾಮುಡು ರುದ್ರುಡು ರಣರಂಗಂ, ರಾಮ ರಾವಣರ ರಣರಂಗ, ರಾಮ ರೌದ್ರ ರುಷಿತಂ ಎಂದು ವ್ಯಾಖ್ಯಾನಿಸಿದ್ದರು. ಇದೀಗ ಈ ಎಲ್ಲ ಊಹಾಪೋಹಗಳಿಗೆ ರಾಜಮೌಳಿಯವರು ತೆರೆ ಎಳೆದಿದ್ದಾರೆ.

ನಿರ್ದೇಶಕ ರಾಜಮೌಳಿ ಮತ್ತು ತಂಡ ಯುಗಾದಿ ಹಬ್ಬದ ಪ್ರಯುಕ್ತ ‘ಆರ್‌ಆರ್‌ಆರ್‌’ ಟೈಟಲ್ ಲೋಗೋ ಮತ್ತು ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ. ಇದೇ ವೇಳೆ ‘ಆರ್‌ಆರ್‌ಆರ್‌’ನ ವಿಸ್ತೃತ ರೂಪ ಏನು ಎಂಬುದನ್ನು ಚಿತ್ರತಂಡ ಘೋಷಣೆ ಮಾಡಿದೆ. ಇನ್ನೂ ಒಂದು ಅಚ್ಚರಿಯ ಮಾಹಿತಿಯನ್ನು ಪ್ರಕಟಿಸಿದ್ದು ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆಯಂತೆ.

ಸಿನಿಮಾ ಬಿಡುಗಡೆಯಾಗುವ ಐದೂ ಭಾಷೆಗಳಲ್ಲೂ ಆರ್‌ಆರ್‌ಆರ್‌ ವಿಸ್ತೃತ ರೂಪವನ್ನು ಘೋಷಿಸಿದ್ದಾರೆ. ತೆಲುಗಿನಲ್ಲಿ ‘ರೌದ್ರಂ ರಣಂ ರುಧಿರಂ’ ಎಂದಾಗಿದ್ದು, ಅದೇ ರೀತಿ ಕನ್ನಡದಲ್ಲಿ ‘ರೌದ್ರ ರಣ ರುಧಿರ’ ಎಂಬುದಾಗಿದೆ. ಈ ಮೂಲಕ ಕನ್ನಡದಲ್ಲಿಯೂ ಅದ್ಧೂರಿ ತೆರೆಗೆ ಸಿನಿಮಾ ತಂಡ ಸಿದ್ಧತೆ ನಡೆಸಿದೆ. ಇನ್ನು ಹಿಂದಿಯಲ್ಲಿ ಇದಕ್ಕೆ ‘ರೈಸ್ ರೋರ್ ರಿವೋಲ್ಟ್’ ಎಂದು ಬದಲಾಯಿಸಲಾಗಿದೆ. ಎಲ್ಲ ಭಾಷೆಗಳಲ್ಲಿ ಹೊಂದುವಂತೆ ಆರ್‌ಆರ್‌ಆರ್‌ ಎಂದು ಟೈಟಲ್ ಇಡಲಾಗಿದೆ.

ಈ ಸಿನಿಮಾದಲ್ಲಿ ಇಬ್ಬರು ತೆಲುಗು ಸ್ಟಾರ್ ನಟರು ಕಾಣಿಸಿಕೊಳ್ಳುತ್ತಿದ್ದು, ಜೂ.ಎನ್‍ಟಿಆರ್ ನೀರಿನ ಪ್ರತಿರೂಪವಾಗಿ ಕಾಣಿಸಿಕೊಂಡರೆ, ರಾಮ್ ಚರಣ್ ಬೆಂಕಿಯ ರೂಪವಾಗಿ ಕಾಣಿಸಿಕೊಂಡಿದ್ದಾರೆ. ಈ ಎರಡು ಶಕ್ತಿಗಳು ಒಂದಾದರೆ ಏನಾಗಬಹುದು ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆಯಂತೆ. ಅಲ್ಲದೆ ಬಾಲಿವುಡ್ ನಟರಾದ ಅಜಯ್ ದೇವ್‍ಗನ್, ಒಲಿವಿಯಾ ಮೊರೀಸ್, ಆಲಿಯಾ ಭಟ್, ಸಮುದ್ರಖಣಿ, ರೇ ಸ್ಟೀವನ್ಸನ್ ಸೇರಿದಂತೆ ಅನೇಕರು ಕಾಣಿಸಿಕೊಳ್ಳುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ಈ ಸಿನಿಮಾಕ್ಕೆ ಡಿವಿವಿ ದಾನಯ್ಯ ಬಂಡವಾಳ ಹೂಡಿದ್ದಾರೆ. ಇಡೀ ಸಿನಿಮಾ 1920ರ ಕಾಲಘಟ್ಟದಲ್ಲಿ ನಡೆಯಲಿದೆಯಂತೆ.