Connect with us

Cinema

ಯಶ್‍ಗಿಂತ ದೊಡ್ಡ ಹೀರೋ ಅವರ ತಂದೆ: ರಾಜಮೌಳಿ

Published

on

-ಕೆಜಿಎಫ್ ಚಿತ್ರದ ವಿಡಿಯೋ ನೋಡಿದ ಅನುಭವ ಹಂಚಿಕೊಂಡ ಬಾಹುಬಲಿಗಾರು

ಹೈದರಾಬಾದ್: ನಾಲ್ಕೈದು ವರ್ಷಗಳ ಹಿಂದೆ ಸಾಯಿಗಾರು ಅವರ ಹತ್ತಿರ ಮಾತನಾಡುತ್ತಿರುವಾಗ ಕನ್ನಡದಲ್ಲಿ ಪ್ರಚಲಿತನಾಗಿರುವ ನಟ ಯಾರು ಅಂತಾ ಕೇಳಿದಾಗ ಯಶ್ ಅಂದ್ರು. ಆ ವೇಳೆ ನನಗೆ ಯಶ್ ಬಗ್ಗೆ ಹೆಚ್ಚಾಗಿ ಗೊತ್ತಿರಲಿಲ್ಲ. ಯಾರು ಯಶ್, ಬ್ಯಾಗ್ರೌಂಡ್ ಏನು ಅಂತಾ ಮರುಪ್ರಶ್ನೆ ಮಾಡಿದೆ. ಯಶ್ ಓರ್ವ ಬಿಎಂಟಿಸಿ ಚಾಲಕನ ಪುತ್ರನಾಗಿದ್ದು, ಸಾಲು ಸಾಲು ಹಿಟ್ ಸಿನಿಮಾ ನೀಡಿದ್ದಾರೆ. ಮಗ ಸೂಪರ್ ಸ್ಟಾರ್ ಆದ್ರು ತಂದೆ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ವಿಷಯ ಕೇಳಿದಾಗ ಯಶ್ ಗಿಂತ ಅವರ ತಂದೆಯೇ ದೊಡ್ಡ ಹೀರೋ ಎಂದು ನನಗೆ ಅನ್ನಿಸುತ್ತದೆ ಅಂತ ರಾಜಮೌಳಿ ಹೇಳಿದರು.

ಭಾನುವಾರ ಸಂಜೆ ಹೈದರಾಬಾದ್ ನಲ್ಲಿ ನಡೆದ ಕೆಜಿಎಫ್ ಚಿತ್ರತಂಡ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವರ್ಷದ ಏಪ್ರಿಲ್ ನಲ್ಲಿ ನನ್ನ ಸಿನಿಮಾದ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದೆ. ಈ ವೇಳೆ ತಾಜ್ ವೆಸ್ಟ್ ಹೋಟೆಲ್ ನಲ್ಲಿ ಉಳಿದುಕೊಂಡಾಗ ಯಶ್ ಸಹ ಅಲ್ಲಿದ್ದರು. ನನ್ನನ್ನು ಭೇಟಿಯಾದ ಯಶ್ ಮತ್ತು ಚಿತ್ರತಂಡ, ಕೆಜಿಎಫ್ ಚಿತ್ರದ ಟೀಸರ್ ಸೇರಿದಂತೆ ಕೆಲವು ದೃಶ್ಯಗಳನ್ನು ತೋರಿಸಿದರು. ಚಿತ್ರದ ದೃಶ್ಯ ನೋಡಿದಾಗ ನನಗೆ ನಿಜವಾಗಲು ಶಾಕ್ ಆಗಿತ್ತು. ದೃಶ್ಯಗಳ ಗುಣಮಟ್ಟ, ಎಫೆಕ್ಸ್ ಎಲ್ಲವು ಪರಿಪೂರ್ಣತೆಯಿಂದ ಕೂಡಿತ್ತು. ಮುಖ್ಯವಾಗಿ ಚಿತ್ರದ ದೃಶ್ಯಗಳ ಒರಿಜಿನಾಲಿಟಿ ನನಗೆ ಇಷ್ಟವಾಯಿತು. ದೊಡ್ಡ ಸಿನಿಮಾ ಅಂತಾ ಹೇಳಿಕೊಳ್ಳುವವರು, ಬೇರೆ ಸಿನಿಮಾಗಳಿಂದ ದೃಶ್ಯಗಳಂತೆ ನಮ್ಮಲ್ಲಿ ತೋರಿಸ್ತಾರೆ. ಕೆಜಿಎಫ್ ಚಿತ್ರದ ಪ್ರತಿಯೊಂದು ದೃಶ್ಯಗಳಲ್ಲಿ ಹೊಸತನವಿದೆ. ಇದು ಮೂರು ವರ್ಷದ ಪರಿಶ್ರಮ, ಹಾಗಾಗಿ ಚಿತ್ರವನ್ನು ದೇಶಾದ್ಯಂತ ಬಿಡುಗಡೆ ಮಾಡಲು ಯೋಚಿಸುತ್ತಿದ್ದೇವೆ ಅಂತಾ ಅಂದ್ರು.

ನಾನು ಕೂಡಲೇ ಮುಂಬೈನಲ್ಲಿರುವ ಅನಿಲ್ ತಡಾನಿ ಫೋನ್ ಮಾಡಿ ಕನ್ನಡದಲ್ಲೊಂದು ಹೊಸತನದ ವಿಭಿನ್ನ ಸಿನಿಮಾ ಸಿದ್ಧವಾಗುತ್ತಿದೆ. ಯಶ್ ಎಂಬವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಕೆಲವು ದೃಶ್ಯಗಳನ್ನು ನೋಡಿದ್ದು, ನನಗೆ ತುಂಬಾನೇ ಇಷ್ಟವಾಗಿದೆ. ನೀವು ಒಂದು ಸಾರಿ ಸಿನಿಮಾದ ಕ್ಲಿಪ್ಸ್ ನೋಡಿ ಏನಾದ್ರು ಮಾಡುವುದಕ್ಕೆ ಸಾಧ್ಯವಾಗುತ್ತಾ ಅಂತ ಕೇಳಿದೆ. ಚಿತ್ರದ ದೃಶ್ಯ ನೋಡಿದ ಖುಷಿಗೆ ಅಂದು ನನ್ನ ಆಪ್ತರೆಲ್ಲರಿಗೂ ಕನ್ನಡದಲ್ಲೊಂದು ಸೂಪರ್ ಸಿನಿಮಾ ಬರುತ್ತಿದೆ ಅಂತಾ ಹೇಳಿದೆ.

ದೃಶ್ಯಗಳಲ್ಲಿ ಕೇವಲ ಯಶ್ ಮಾತ್ರ ಕಾಣಲ್ಲ. ಚಿತ್ರದ ಹಿಂದೆ ಕೆಲಸ ಮಾಡಿದ ಪ್ರತಿ ತಂತ್ರಜ್ಞರ ಕ್ಷಮತೆ ನನಗೆ ಕಾಣುತ್ತಿತ್ತು. ಚಿತ್ರತಂಡದಲ್ಲಿ ಕೆಲಸ ಮಾಡಿದ ತಂತ್ರಜ್ಞರ ಪರಿಚಯ ನನಗಿಲ್ಲ. ಆದ್ರೆ ಸಿನಿಮಾದಲ್ಲಿ ಅವರ ಅಚ್ಚುಕಟ್ಟಿನ ಕೆಲಸದಲ್ಲಿ ಕಾಣುತ್ತಾರೆ. ಕೆಜಿಎಫ್ ಎಂಬ ಉತ್ಪನ್ನ ಹೊರಬರಲು ಪ್ರತಿಯೊಬ್ಬರ ಕಠಿಣ ಪರಿಶ್ರಮ ಅಡಕವಾಗಿದೆ. ತೆಲುಗು ಜನರು ಸಿನಿಮಾ ಮಾಡಿದ್ದು ಯಾರು? ಯಾವ ಭಾಷೆ? ಅಂತಾ ನೋಡಲ್ಲ. ಚಿತ್ರದ ಗುಣಮಟ್ಟ ಕಥೆಯನ್ನು ನೋಡುತ್ತಾರೆ. ತೆಲುಗು ಮಾತ್ರವಲ್ಲದೇ ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತಾರೆ. ಅಂತೆಯೇ ಕೆಜಿಎಫ್ ಸಿನಿಮಾ ನೋಡಿ ಅಂತ ರಾಜಮೌಳಿ ಜನರಲ್ಲಿ ಮನವಿ ಮಾಡಿಕೊಂಡರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv