Sunday, 15th December 2019

ಮಾರಾಟಕ್ಕಿರೋ ಮನೆ ನೋಡಲು ಮತ್ತೆ ಬಂದ ಶ್ರುತಿ ಹರಿಹರನ್!

ಬೆಂಗಳೂರು: ಕನ್ನಡದಲ್ಲಿ ಭರವಸೆಯ ನಟಿಯಾಗಿ ನೆಲೆ ಕಂಡುಕೊಂಡಿದ್ದವರು ಶ್ರುತಿ ಹರಿಹರನ್. ಆದರೆ ಒಂದಷ್ಟು ವಿವಾದದ ಬೆನ್ನಿಗೇ ಅವರು ಮದುವೆಯಾಗಿ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರು. ಇದೀಗ ವಿದೇಶದಲ್ಲಿ ನೆಲೆಸಿರೋ ಶ್ರುತಿ ಬಹು ಕಾಲದ ನಂತರ ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ಮತ್ತೆ ವಾಪಾಸಾಗಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈವರೆಗೆ ಸಾಕಷ್ಟು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ಶ್ರುತಿ ‘ಮನೆ ಮಾರಾಟಕ್ಕಿದೆ’ ಚಿತ್ರದಲ್ಲಿ ಮತ್ತೊಂದು ಥರತದ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಶ್ರುತಿ ಹರಿಹರನ್ ಯಾವಾಗ ಒಂದು ವಿವಾದದ ನಂತರದಲ್ಲಿ ವಿದೇಶ ಸೇರಿಕೊಂಡಿದ್ದರೋ ಆ ನಂತರದಲ್ಲಿ ಮತ್ತೆ ಅವರು ಮರಳೋದು ಕಷ್ಟ ಎಂಬಂಥಾ ವಾತಾವರಣವಿತ್ತು. ಆದರೆ ಅದರ ಆಜೂ ಬಾಜಲ್ಲಿಯೇ ಮನೆ ಮಾರಾಟಕ್ಕಿದೆ ಚಿತ್ರವನ್ನು ಒಪ್ಪಿಕೊಂಡಿದ್ದ ಶ್ರುತಿ ಹರಿಹರನ್ನು ಇಲ್ಲಿ ಚೆಂದದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಇದು ಔಟ್ ಆಂಡ್ ಔಟ್ ಕಾಮಿಡಿ ಚಿತ್ರ ಅನ್ನೋದು ಈಗಾಗಲೇ ಪ್ರೇಕ್ಷಕರಿಗೆಲ್ಲ ಗೊತ್ತಾಗಿದೆ. ಟ್ರೇಲರ್ ನಲ್ಲಿ ಕಾಣಿಸಿಕೊಂಡಿದ್ದ ದೃಷ್ಯಾವಳಿಗಳು ಹಾರ್ ಲುಕ್ಕಿನಲ್ಲಿ ಬೆಚ್ಚಿ ಬೀಳಿಸುತ್ತಲೇ ಹಾಸ್ಯದ ವಿಚಾರದಲ್ಲಿ ಎದ್ದೂ ಬಿದ್ದು ನಗುವಂತೆ ಮಾಡಿವೆ. ಕೆಲವೇ ಕೆಲ ನಿಮಿಷದ ಈ ಟ್ರೇಲರ್ ಈ ಪಾಟಿ ಪರಿಣಾಮಕಾರಿಯಾಗಿರೋವಾಗ ಇಡೀ ಚಿತ್ರ ಅದೆಷ್ಟು ಮಜವಾಗಿ ಮೂಡಿ ಬಂದಿರಬಹುದೆಂದು ಯಾರಿಗಾದರೂ ಅಂದಾಜು ಸಿಗದಿರಲು ಸಾಧ್ಯವಿಲ್ಲ.

ಹಾಗಾದರೆ ಕಂಪ್ಲೀಟ್ ಕಾಮಿಡಿ ಶೈಲಿಯ ಈ ಚಿತ್ರದಲ್ಲಿ ನಾಯಕಿಯಾಗಿ ಶ್ರುತಿ ಹರಿಹರನ್ ಯಾವ ಥರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಂಬ ಕುತೂಹಲ ಕಾಡೋದು ಸಹಜವೇ. ಮನೆ ಮಾರಾಟಕ್ಕಿದೆ ಚಿತ್ರತಂಡ ಈ ವಿಚಾರದಲ್ಲಿ ಭಾರೀ ಜಾಗರೂಕತೆಯಿಂದ ವರ್ತಿಸುತ್ತಾ ಸಾಗಿ ಬಂದಿದೆ. ತೀರಾ ಟ್ರೇಲರ್‍ನಲ್ಲಿಯೂ ಕೂಡಾ ಸರಿಕಟ್ಟಾಗಿ ಪಾತ್ರಗಳ ಚಹರೆ ಗೊತ್ತಾಗದಂತೆ ಎಚ್ಚರ ವಹಿಸಿದೆ. ಶ್ರುತಿ ಪಾತ್ರದ ವಿಚಾರದಲ್ಲಿಯೂ ಕೆಲವೇ ಕೆಲ ಮಾಹಿತಿ ಬಿಟ್ಟು ಕೊಡುತ್ತಾ ಗೌಪ್ಯತೆ ಕಾಪಾಡಿಕೊಂಡಿದೆ. ಅಂತೂ ಈ ಸಿನಿಮಾದಲ್ಲಿ ಶ್ರುತಿ ಮನೆ ಓನರ್ ಆಗಿ ಕಾಣಿಸಿಕೊಂಡಿರೋದಂತೂ ಸತ್ಯ. ಆ ಪಾತ್ರದ ಮಜಾ ಏನನ್ನೋದು ಈ ವಾರವೇ ಎಲ್ಲರಿಗೂ ಗೊತ್ತಾಗಲಿದೆ.

Leave a Reply

Your email address will not be published. Required fields are marked *