Connect with us

Bengaluru City

ಶ್ರೀಲಂಕಾ ಸ್ಫೋಟ: ಡಿಎನ್‍ಎ ಪರೀಕ್ಷೆ ಹೇಗೆ? ಯಾಕೆ ಮಾಡುತ್ತಾರೆ?

Published

on

ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ಬಾಂಬ್ ದಾಳಿ ಘಟನೆಯಲ್ಲಿ ಕರ್ನಾಟಕ ಇಬ್ಬರು ನಾಪತ್ತೆಯಾಗಿದ್ದು, ಅವರ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಗಳ ದೇಹಗಳು ಸಿಕ್ಕಿದ್ದು ಗುರುತು ಪತ್ತೆಯಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದು, ಸಾವನ್ನಪ್ಪಿದ್ದ ಬಗ್ಗೆ ಮಾಹಿತಿ ಪಡೆಯಲು ತಜ್ಞರು ಡಿಎನ್‍ಎ ಪರೀಕ್ಷೆ ಮೊರೆ ಹೋಗುವ ಸಾಧ್ಯತೆ ಇದೆ.

ವ್ಯಕ್ತಿಯೊಬ್ಬರು ಸಾವನ್ನಪ್ಪಿ ಆತನ ಗುರುತು ಲಭ್ಯವಾಗದ ಸಂದರ್ಭದಲ್ಲಿ ಈ ವಿಧಾನವನ್ನು ತಜ್ಞರು ಬಳಕೆ ಮಾಡುತ್ತಾರೆ. ಅದರಲ್ಲೂ ಬಾಂಬ್ ದಾಳಿ ನಡೆದ ಸಂದರ್ಭದಲ್ಲಿ ಹೆಚ್ಚಿನ ಮಂದಿ ಸಾವನ್ನಪ್ಪಿದ ಪರಿಣಾಮ ಸದ್ಯ ಪ್ರಕ್ರಿಯೆ ತಡವಾಗಬಹುದು ಎಂದು ಬೆಂಗಳೂರಿನ ಸಂಶೋಧಕ, ವಿಧಿ ವಿಜ್ಞಾನ ತಜ್ಞ ಡಾ.ದಿನೇಶ್ ರಾವ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಡಿಎನ್‍ಎ ಪರೀಕ್ಷೆ ಹೇಗೆ?
ವೈದಕೀಯ ಪರೀಕ್ಷೆಯಲ್ಲಿ ಡಿಎನ್‍ಎ ಪ್ರಕ್ರಿಯೆಯನ್ನು ಪ್ರೊಫೈಲಿಂಗ್ ಎಂದು ಕರೆಯುತ್ತಾರೆ. ಈ ವೇಳೆ ಟಿಶ್ಯೂ ಸ್ಯಾಂಪಲಿಂಗ್ ಮೂಲಕ ದೇಹದ ಗುರುತು ಪತ್ತೆ ಹಚ್ಚಲಾಗುತ್ತದೆ. ಸಾಮಾನ್ಯ ಪ್ರಕರಣದಲ್ಲಿ ಡಿಎನ್‍ಎ ಪರೀಕ್ಷೆ ನಡೆಸಲು ರಕ್ತದ ಮಾದರಿಯನ್ನೇ ಬಳಸುತ್ತಾರೆ. ವಿಶೇಷ ಸಂದರ್ಭದಲ್ಲಿ ಡಿಎನ್‍ಎ ಪರೀಕ್ಷೆ ಮಾಡಲು ಕೂದಲು, ಉಗುರು, ಚರ್ಮವನ್ನು ಪಡೆಯಲಾಗುತ್ತದೆ.

ಯಾರ ಡಿಎನ್‍ಎ ಪಡೆಯುತ್ತಾರೆ?
ಈ ಪರೀಕ್ಷೆಯನ್ನು ನಡೆಸಲು ಮೃತ ವ್ಯಕ್ತಿಯ ವ್ಯಕ್ತಿಯ ಮಗ, ಸಹೋದರರು, ತಂದೆ, ತಾಯಿ ಹಾಗೂ ರಕ್ತ ಸಂಬಂಧಿಕರ ಮಾದರಿಯನ್ನು ಪಡೆಯುತ್ತಾರೆ. ಆದರೆ ಪತ್ನಿ, ಪತಿಯ ಡಿಎನ್‍ಎ ನಿಂದ ಮೃತ ವ್ಯಕ್ತಿಗಳ ಗುರುತು ಪತ್ತೆ ಹಚ್ಚುವುದು ಕಷ್ಟ ಸಾಧ್ಯವಾಗುತ್ತದೆ. ಸಂಬಂಧಿಕರ ಬಳಿ ಪಡೆದ ಮಾದರಿಯನ್ನು ಮೃತ ವ್ಯಕ್ತಿಯ ದೇಹದ ಡಿಎನ್‍ಎಗೆ ಹೋಲಿಕೆ ಮಾಡಿ ನೋಡಲಾಗುತ್ತದೆ. ವಿಶೇಷವೆಂದರೆ ಡಿಎನ್‍ಎ ಪರೀಕ್ಷೆಯಲ್ಲೂ ಶೇ.100ಕ್ಕೆ 100 ರಷ್ಟು ಹೊಂದಾಣಿಕೆ ಆಗುವುದಿಲ್ಲ. ಕೇವಲ ಶೇ.60 ರಿಂದ 70 ರಷ್ಟು ಹೊಂದಾಣಿಕೆಯಾಗುತ್ತದೆ. ಈ ಫಲಿತಾಂಶದ ಆಧಾರದಲ್ಲಿ ಮೃತ ದೇಹವನ್ನು ಗುರುತಿಸಲಾಗುತ್ತದೆ.

ಡಿಎನ್‍ಎ ಪರೀಕ್ಷೆ ಏಕೆ?
ಸಾಮಾನ್ಯ ಪ್ರಕರಣದಲ್ಲಿ ಡಿಎನ್‍ಎ ಪರೀಕ್ಷೆಯನ್ನು ವ್ಯಕ್ತಿಯ ಗುರುತು ಪತ್ತೆ ಮಾಡಲು ಬಳಕೆ ಮಾಡುತ್ತಾರೆ. ಆದರೆ ಇಂತಹ ಘೋರ ದಾಳಿ ಸಂದರ್ಭದಲ್ಲಿ ಮೃತ ವ್ಯಕ್ತಿಯ ದೇಹದ ಭಾಗಗಳು ಛಿದ್ರ ಛಿದ್ರವಾಗಿರುವ ಕಾರಣ ಪರೀಕ್ಷೆ ನಡೆಸುವುದು ಕಡ್ಡಾಯವಾಗುತ್ತದೆ. ಏಕೆಂದರೆ ಆತ್ಮಾಹುತಿ ದಾಳಿ ನಡೆಸಿದ ವ್ಯಕ್ತಿಯ ದೇಹದ ಭಾಗಗಳು ಇಲ್ಲಿ ಲಭ್ಯವಾಗುವುದರಿಂದ ಪೊಲೀಸ್ ತನಿಖೆ ನಡೆಸಲು ಪ್ರಮುಖ ಸಾಕ್ಷಿಯಾಗಿ ಲಭ್ಯವಾಗಲಿದೆ. ಇವುಗಳ ಆಧಾರ ಮೇಲೆಯೇ ಮುಂದಿನ ತನಿಖೆ ಬಹುಬೇಗ ನಡೆಯುವ ಸಾಧ್ಯತೆ ಇರುತ್ತದೆ. ಅಲ್ಲದೇ ದಾಳಿ ಹಿಂದಿನ ಆರೋಪಿಗಳ ಪತ್ತೆಗೂ ಇವು ನೆರವು ನೀಡಲಿದೆ.

ಶ್ರೀಲಂಕಾದಲ್ಲಿ ನಡೆದ ಸ್ಫೋಟದಲ್ಲಿ ಹಲವು ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಮೃತದೇಹಗಳ ಸಂಖ್ಯೆ ಹೆಚ್ಚಾಗಿದ್ದು, ಡಿಎನ್‍ಎ ಪರೀಕ್ಷೆ ಸೇರಿದಂತೆ ಇತರೇ ಪರೀಕ್ಷೆಗಳನ್ನು ನಡೆಸಲು ಕಾಲಾವಕಾಶದ ಅಗತ್ಯವಿರುತ್ತದೆ. ವಿದೇಶಾಂಗ ಇಲಾಖೆ ಎಷ್ಟೇ ನಿರಂತರವಾಗಿ ಸಂಪರ್ಕ ಸಾಧಿಸಿ ನಮ್ಮವರ ಬಗ್ಗೆ ಮಾಹಿತಿ ಲಭಿಸಲು ಸಮಯ ಬೇಕಾಗುತ್ತದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.