Connect with us

Cricket

ಸಚಿನ್‍ರಂತೆ ಎಂಎಸ್‍ಡಿಯನ್ನು ಹೆಗಲ ಮೇಲೆ ಹೊತ್ತು ಬೀಳ್ಕೊಡಬೇಕು: ಶ್ರೀಶಾಂತ್

Published

on

– ಧೋನಿ ಟಿ-20 ವಿಶ್ವಕಪ್ ಆಡಬೇಕು

ನವದೆಹಲಿ: ಭಾರತ ಮಾಜಿ ನಾಯಕ ಎಂಎಸ್ ಧೋನಿ ಅವರು ಈ ಬಾರಿಯ ಟಿ-20 ವಿಶ್ವಕಪ್ ಆಡಬೇಕು ಮತ್ತು ಅವರನ್ನು ಕೂಡ ಸಚಿನ್ ಅವರಂತೆ ಹೆಗಲ ಮೇಲೆ ಹೊತ್ತು ಬೀಳ್ಕೊಡಬೇಕು ಎಂದು ಭಾರತದ ವೇಗದ ಬೌಲರ್ ಶ್ರೀಶಾಂತ್ ಹೇಳಿದ್ದಾರೆ.

ಕೊನೆಯ ಬಾರಿಗೆ 2019ರ ವಿಶ್ವಕಪ್‍ನಲ್ಲಿ ಬ್ಯಾಟ್ ಬೀಸಿದ್ದ ಧೋನಿ, ಆ ನಂತರ ಕ್ರಿಕೆಟ್‍ಯಿಂದ ದೂರ ಉಳಿದಿದ್ದರು. ಈ ನಡುವೆ ಐಪಿಎಲ್ ಆಡಲು ಧೋನಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಅದೂ ಸಾಧ್ಯವಾಗಿಲ್ಲ. ಈ ಎಲ್ಲದರ ನಡುವೆ ಧೋನಿ ಮತ್ತೆ ಕಮ್‍ಬ್ಯಾಕ್ ಮಾಡ್ತಾರಾ? ಇಲ್ಲ ನಿವೃತ್ತಿ ಪಡೆಯುತ್ತಾರಾ ಎಂಬ ಚರ್ಚೆಗಳು ಜೋರಾಗಿ ನಡೆದಿವೆ. ಈಗ ಶ್ರೀಶಾಂತ್ ಅವರು ಧೋನಿ ಮತ್ತೆ ಕ್ರಿಕೆಟ್ ಆಡಬೇಕು ಎಂದು ಹೇಳಿದ್ದಾರೆ.

ಖಾಸಗಿ ಕ್ರಿಕೆಟ್ ವಾಹಿನಿಯೊಂದರ ಜೊತೆ ಮಾತನಾಡಿರುವ ಶ್ರೀಶಾಂತ್ ಅವರು, ಭಾರತೀಯ ಕ್ರಿಕೆಟ್ ಕ್ಷೇತ್ರಕ್ಕೆ ಧೋನಿ ಅವರ ಕೊಡುಗೆ ಅಪಾರ. ನಾಯಕನಾಗಿ ಅವರು ಮಾಡಿರುವ ಸಾಧನೆಗೆ ಸಾಟಿಯೇ ಇಲ್ಲ. ಈಗ ಧೋನಿ ಅವರನ್ನು ಟೀಕೆ ಮಾಡುತ್ತಿರುವವರಿಗೆ ಅವರು ಮುಂದೆ ಬ್ಯಾಟ್ ಮೂಲಕ ಉತ್ತರ ಕೊಡಲಿದ್ದಾರೆ. ಅವರು ಖಂಡಿತವಾಗಿಯೂ ಈ ಬಾರಿಯ ಟಿ-20 ವಿಶ್ವಕಪ್ ಆಡಬೇಕು ಎಂದು ತಿಳಿಸಿದ್ದಾರೆ.

ನನಗೆ ವಿಶ್ವಪಕ್ ಮುಂಚೆಯೇ ಐಪಿಎಲ್ ನಡೆಯುತ್ತದೆ ಎಂದು ಭರವಸೆ ಇದೆ. ಈ ಐಪಿಎಲ್‍ನಲ್ಲಿ ಧೋನಿ ಭಾಯ್, ಟೀಕಾಕಾರರಿಗೆ ಬ್ಯಾಟ್ ಮೂಲಕ ಉತ್ತರ ನೀಡಲಿದ್ದಾರೆ. ಅವರು ಈಗ ಮೌನವಾಗಿ ಇರಬಹುದು. ಆದರೆ ಅವರಿಗೆ ಗೊತ್ತು ಏನೂ ಮಾಡಬೇಕು ಎಂದು. ಅವರು ದೇಶಕ್ಕಾಗಿ ಆಡಿದ್ದಾರೆ. ದೇಶಕ್ಕಾಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೆಲ್ಲ ಅವರು ದೇಶಕ್ಕಾಗಿ ಮಾಡುತ್ತಿದ್ದಾರೆ. ಅವರ ಬಗ್ಗೆ ಮಾತನಾಡುವುದಕ್ಕಿಂತ ಮುಂಚೆ ಕೆಲವರು ಯೋಚಿಸಬೇಕು ಎಂದು ಶ್ರೀಶಾಂತ್ ಹೇಳಿದ್ದಾರೆ.

ಅವರ ನಿವೃತ್ತಿಯನ್ನು ಧೋನಿ ಅವರೇ ನಿರ್ಧಾರ ಮಾಡಲಿ. ಅವರು ಅಭಿಮಾನಿಗಳಿಗಾಗಿ ಅವರು ಮುಂದಿನ ಟಿ-20 ವಿಶ್ವಕಪ್ ಆಡಲಿ. 2011ರ ವಿಶ್ವಕಪ್‍ನಲ್ಲಿ ಸಚಿನ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ಹಾಗೇ ಯಾರದಾರೂ ಮೈದಾನದಲ್ಲಿ ಧೋನಿ ಅವರನ್ನು ಹೊತ್ತು ಓಡಾಡಬೇಕು ಎಂಬುದು ನನ್ನ ಆಸೆ. ಅವರು ಅದಕ್ಕೆ ಅರ್ಹರಾಗಿದ್ದಾರೆ ಎಂದು ಶ್ರೀಶಾಂತ್ ಅಭಿಪ್ರಾಯ ಪಟ್ಟಿದ್ದಾರೆ.

ಐಪಿಎಲ್ ಮ್ಯಾಚ್ ಫಿಕ್ಸಿಂಗ್‍ನಲ್ಲಿ ಭಾಗಿಯಾಗಿದ್ದಾರೆ ಎಂದು ಬಿಸಿಸಿಐ ಶ್ರೀಶಾಂತ್ ಅವರನ್ನು ಕ್ರಿಕೆಟ್‍ನಿಂದ ನಿಷೇಧ ಮಾಡಿತ್ತು. ಈ ಅವಧಿ ಇದೇ ವರ್ಷದ ಸೆಪ್ಟಂಬರ್ ಗೆ ಮುಗಿಯಲಿದೆ. ಈಗಾಗಲೇ ಶ್ರೀಶಾಂತ್ ಕೇರಳದ ಪರವಾಗಿ ರಣಜಿ ಪಂದ್ಯವಾಡಲು ಸಿದ್ಧವಾಗಿದ್ದಾರೆ. ಜೊತೆಗೆ 2023ರಲ್ಲಿ ನಡೆಯುವ ವಿಶ್ವಕಪ್ ಆಡುವುದೇ ನನ್ನ ಗುರಿ ಎಂದು ಕೂಡ ಹೇಳಿಕೊಂಡಿದ್ದಾರೆ.