Connect with us

Districts

ಸೈನಿಕರ ತವರು ಕೊಡಗು ಜಿಲ್ಲೆಯಲ್ಲಿ ಮತ್ತೊಂದು ವೀರಯೋಧನ ಪ್ರತಿಮೆ ಅನಾವರಣ

Published

on

ಮಡಿಕೇರಿ: ಐದೂವರೆ ದಶಕಗಳ ಹಿಂದೆ (1965ರಲ್ಲಿ) ಭಾರತ-ಪಾಕ್ ನಡುವಿನ ಯುದ್ಧದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಬಲಿದಾನಗೈದ ಕೊಡಗಿನ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆಯನ್ನು ಇಂದು ಮಂಜಿನ ನಗರಿ ಮಡಿಕೇರಿಯಲ್ಲಿ ಅನಾವರಣಗೊಳಿಸಲಾಯಿತ್ತು.

ಮಡಿಕೇರಿ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ವೀರ ಯೋಧನ ಪ್ರತಿಮೆಯನ್ನು ನಿವೃತ್ತ ಏರ್ ಮಾರ್ಷಲ್ ಕೆ ಸಿ ಕಾರ್ಯಪ್ಪ ಅವರು ಅನಾವರಣಗೊಳಿಸಿದರು. ಭಾರತ-ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ತಮ್ಮ ವಿಮಾನದ ಮೂಲಕ ಕೆಡವುವ ಮೂಲಕ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರು ಆ ಸಂದರ್ಭ ವೀರಮರಣವನ್ನಪ್ಪಿದರು. ಈ ವಿಚಾರವನ್ನು ಪಾಕ್ ಸೇನೆಯ ಯುದ್ಧ ವಿಮಾನದ ಪೈಲಟ್ ಆಗಿದ್ದ ಅಮ್ಜದ್ ಹುಸೇನ್ ಅವರು ತಿಳಿಸಿದ್ದರು.

ವಿಮಾನದ ಎರಡೂ ರೆಕ್ಕೆಗಳಿಗೆ ಬೆಂಕಿ ತಗುಲಿದ್ದರೂ ಅದರ ಮೂಲಕವೇ ಯುದ್ಧ ಮಾಡಿದ್ದ ಸ್ಕ್ವಾ.ಲೀ.ದೇವಯ್ಯ ಅವರ ಸಾಹಸವನ್ನು ದೇಶ ವಿದೇಶಗಳಿಂದ ಕೊಡಗು ಜಿಲ್ಲೆಗೆ ಆಗಮಿಸುವವರಿಗೆ ತಿಳಿಸಲು ಮತ್ತು ವೀರಯೋಧನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ನಗರದ ಹೃದಯ ಭಾಗದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಸ್ಮಾರಕ ಟ್ರಸ್ಟ್ ಪ್ರಮುಖರಾದ ಅಜ್ಜಮಾಡ ಕಟ್ಟಿ ಮಂದಯ್ಯ ಅವರ ನೇತೃತ್ವದಲ್ಲಿ ಮಹಾನ್ ಯೋಧನ ವಿಗ್ರಹವನ್ನು ನಿರ್ಮಿಸಲಾಗಿದೆ.

ಸುಮಾರು 15 ರಿಂದ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವೀರಯೋಧನ ಪ್ರತಿಮೆ ಇಂದು ಅನಾವರಣಗೊಂಡಿದ್ದು, ಸೈನಿಕರ ನಾಡಿಗೆ ಮತ್ತೊಂದು ವೀರ ಯೋಧನ ಪ್ರತಿಮೆ ಅನಾವರಣಗೊಂಡಿರುವುದು ಜಿಲ್ಲೆಯ ಜನರಲ್ಲಿ ಹರ್ಷ ತಂದಿದೆ.

ಯಾರಿದು ಅಜ್ಜಮಾಡ ದೇವಯ್ಯ?
ದೇವಯ್ಯ ವಿರಾಜಪೇಟೆ ತಾಲೂಕಿನ ಕುಟ್ಟ ಸಮೀಪದ ಮಂಚಳ್ಳಿ ಗ್ರಾಮದ ಅಜ್ಜಮಾಡ ಕುಟುಂಬದ ಬೋಪಯ್ಯ ಹಾಗೂ ನೀಲಮ್ಮ ದಂಪತಿ ಪುತ್ರ. 1932 ಡಿ. 24ರಂದು ದೇವಯ್ಯ ಅವರು ಜನಿಸಿದರು. ದೇವಯ್ಯ ಅವರು 1954 ಡಿಸೆಂಬರ್ 6ರಂದು ಭಾರತೀಯ ವಾಯುಪಡೆಯ ಪೈಲಟ್ ಆಗಿ ನೇಮಕಗೊಂಡರು. 1965ರಲ್ಲಿ ಪಾಕಿಸ್ತಾನ ಭಾರತದ ಯುದ್ಧದಲ್ಲಿ ಅಜ್ಜಮಾಡ ದೇವಯ್ಯ ಪಾಕಿಸ್ತಾನದ ಮೇಲೆ ಬಾಂಬ್ ದಾಳಿ ನಡೆಸಿ ಹಿಂತಿರುಗುತ್ತಿದ್ದಾಗ ಪಾಕಿಸ್ತಾನದ ಯುದ್ಧ ವಿಮಾನ ಹಿಂಬಾಲಿಸಿ ಬರುತಿತ್ತು. ದೇವಯ್ಯ ಅವರು ಈ ಸಂದರ್ಭ ಪಾಕ್ ಸೈನಿಕರಿಂದ ತಪ್ಪಿಸಿಕೊಳ್ಳುವ ಎಲ್ಲ ಅವಕಾಶವೂ ಇತ್ತು. ಆದರೂ ಅವರು ಭಾರತದ ಉಳಿದ ವಿಮಾನಗಳ ರಕ್ಷಣೆಗಾಗಿ ಪಾಕ್ ವಿಮಾನದೊಂದಿಗೆ ಕಾದಾಟಕ್ಕೆ ನಿಂತು, ತಮ್ಮ ದುರ್ಬಲ ವಿಮಾನದಲ್ಲಿ ಕೆಚ್ಚೆದೆಯಿಂದ ನೇರವಾಗಿ ಹೋರಾಡಿ, ಶತ್ರುವಿನ ವಿಮಾನವನ್ನು ಹೊಡೆದುರುಳಿಸಿ ತಾವು ಕೂಡ ಹುತಾತ್ಮರಾದರು.

1965ರಲ್ಲಿ ದೇವಯ್ಯ ಅವರ ಫೈಟರ್ ವಿಮಾನ ಕಣ್ಮರೆಯಾದ ನಂತರ ಅವರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಸೇನೆ ಅವರನ್ನು ನಾಪತ್ತೆಯಾದವರ ಪಟ್ಟಿಗೆ ಸೇರಿಸಿತ್ತು. ಆದರೆ 1979ರಲ್ಲಿ ಬ್ರಿಟನ್ ಲೇಖಕರೊಬ್ಬರು ಬರೆದ ಪುಸ್ತಕದಲ್ಲಿ ದೇವಯ್ಯ ತನ್ನ ಪ್ರಾಣ ಹಂಗನ್ನು ತೊರೆದು ದೇಶದ ರಕ್ಷಣೆಗೆ ಮುಂದಾದ ಸಂದರ್ಭವನ್ನು ಹೇಳಿದ್ದರು. ನಂತರ ಸರ್ಕಾರ ದೇವಯ್ಯ ಅವರನ್ನು ಹುತಾತ್ಮರೆಂದು ಪರಿಗಣಿಸಿ 1988ರಲ್ಲಿ ಮರಣೋತ್ತರ ಮಹಾವೀರ್ ಪ್ರಶಸ್ತಿ ನೀಡಿ ಗೌರವಿಸಿತ್ತು.

Click to comment

Leave a Reply

Your email address will not be published. Required fields are marked *