Saturday, 20th July 2019

ಗೈರಾದರೆ ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗುವುದು – ಜನಪ್ರತಿನಿಧಿಗಳಿಗೆ ಕೋರ್ಟ್ ಎಚ್ಚರಿಕೆ

ಬೆಂಗಳೂರು: ವಿಚಾರಣೆಗೆ ಒಂದು ದಿನ ಗೈರು ಹಾಜರಾದರೆ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿಬಿಡುತ್ತೇನೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ.ರಾಮಚಂದ್ರ ಹುದ್ದಾರ್ ಅವರು ಜನ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನ್ಯಾಯಾಲಯವು ಇಂದು ಶಾಸಕರು, ಸಚಿವರು, ಸಂಸದರ ಮೇಲಿದ್ದ ಆರೋಪಗಳ ಕುರಿತು ವಿಚಾರಣೆ ನಡೆಸಿತು. ಈ ವೇಳೆ ಪದೇ ಪದೇ ಕೋರ್ಟ್ ವಿಚಾರಣೆಗೆ ಹಾಜರಾಗುತ್ತಿದ್ದ ಜನಪ್ರತಿನಿಧಿಗಳಿಗೆ ನ್ಯಾ.ರಾಮಚಂದ್ರ ಅವರು ಫುಲ್ ಕ್ಲಾಸ್ ತೆಗೆದುಕೊಂಡರು.

ಶಾಸಕರಾದ ಆನಂದ್ ಸಿಂಗ್, ನಾಗೇಂದ್ರ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ಅವರು ಕೋರ್ಟ್ ವಿಚಾರಣೆಗೆ ಗೈರಾಗಿದ್ದರು. ಹೀಗಾಗಿ ಅವರ ವಿರುದ್ಧ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ಅಷ್ಟೇ ಅಲ್ಲದೆ ಆರೋಪಿಗಳ ಪರ ವಕೀಲರಿಗೆ ಚಾಟಿ ಬೀಸಿದ ನ್ಯಾಯಾಧೀಶರು, ಕೋರ್ಟ್ ಅಂದ್ರೆ ನೀವು ಏನೆಂದು ತಿಳಿದುಕೊಂಡಿದ್ದೀರಿ ಎಂದು ತರಾಟೆ ತೆಗೆದುಕೊಂಡರು.

ರಾಮನಗರ ರೆಸಾರ್ಟಿನಲ್ಲಿ ಕಂಪ್ಲಿ ಗಣೇಶ್ ಅವರಿಂದ ಆನಂದ್ ಸಿಂಗ್ ಹಲ್ಲೆಗೆ ಒಳಗಾಗಿದ್ದರು. ಹಲ್ಲೆಗೆ ಒಳಗಾಗಿದ್ದ ಆನಂದ್ ಸಿಂಗ್ ಇಂದು ವಿಚಾರಣೆಗೆ ಹಾಜರಾಗಬೇಕಿತ್ತು. ಇತ್ತ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಆರೋಪಿ ಶಾಸಕ ನಾಗೇಂದ್ರ, ಅಕ್ರಮ ಗಣಿಗಾರಿಕೆ ಪ್ರಕರಣ ಎದುರಿಸುತ್ತಿರುವ ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಅವರು ಇಂದು ವಿಚಾರಣೆಗೆ ಹಾಜರಾಗದೇ ಗೈರಾಗಿದ್ದರು.

ದೇಶದ ಹಲವು ಮಂದಿ ರಾಜಕಾರಣಿಗಳ ಮೇಲೆ ಕೊಲೆ, ಭ್ರಷ್ಟಾಚಾರ, ಅತ್ಯಾಚಾರ ಮತ್ತು ಅಪಹರಣ ಪ್ರಕರಣಗಳಿದ್ದರೂ ಅವರು ಜನಪ್ರತಿನಿಧಿಗಳಾಗಿ ಮುಂದುವರಿಯುತ್ತಿದ್ದಾರೆ. ಪ್ರತಿ ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ನಾಯಕರ ವಿರುದ್ಧ ಈ ಪ್ರಕರಣವನ್ನು ಕೆದಕಿ ಆರೋಪ ಪ್ರತ್ಯಾರೋಪ ಮಾಡುತ್ತಿರುತ್ತಾರೆ. ಈ ಸಂಬಂಧ 2017ರಲ್ಲಿ ಸುಪ್ರೀಂ ಕೋರ್ಟ್ ಶಾಸಕರು ಮತ್ತು ಸಂಸದರ ಮೇಲಿನ ಪ್ರಕರಣದ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವ ಯೋಜನೆಯನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿತ್ತು. ಸುಪ್ರೀಂ ಸಲಹೆಯ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸ್ಥಾಪನೆಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *