Connect with us

Latest

ಜೈಲಲ್ಲಿ ಬಾಬಾಗೆ ರಾಜಾತೀಥ್ಯ – ಮಿನರಲ್ ವಾಟರ್, ಜೊತೆಗೊಬ್ಬ ಅಸಿಸ್ಟೆಂಟ್

Published

on

ನವದೆಹಲಿ: ನಿನ್ನೆಯವರೆಗೂ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡ್ತಿದ್ದ ಸಾವಿರಾರು ಕೋಟಿ ಆಸ್ತಿಪಾಸ್ತಿಯ ಒಡೆಯ ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್‍ನ ಮೊದಲ ಜೈಲು ರಾತ್ರಿ ಕುರಿತಂತೆ ಇಂಟ್ರೆಸ್ಟಿಂಗ್ ಮಾಹಿತಿ ಲಭ್ಯವಾಗಿದೆ. ರೋಹ್ಟಕ್ ಜೈಲಿಗೆ ವಿಶೇಷ ಹೆಲಿಕಾಪ್ಟರ್‍ನಲ್ಲಿ ಬಿಗಿ ಭದ್ರತೆ ನಡುವೆ ಬಂದಿಳಿದ ಗುರ್ಮಿತ್ ಬಾಬಾ, ತೀರ್ಪಿನಿಂದ ಕಂಗಾಲಾಗಿದ್ದರು. ಯಾರೊಂದಿಗೂ ಮಾತನಾಡಲಿಲ್ಲ. ಆದ್ರೆ ಸಾಕಷ್ಟು ಪ್ರಭಾವ ಹೊಂದಿರುವ ಅತ್ಯಾಚಾರಿ ಬಾಬಾಗೆ ಜೈಲಿನಲ್ಲಿ ಸಕಲ ಸವಲತ್ತು ನೀಡಲಾಗಿದೆ.

ಗುರ್ಮಿತ್ ಬಾಬಾಗೆ ಜೈಲಿನಲ್ಲಿ ವಿಶೇಷ ಸೆಲ್ ನೀಡಲಾಗಿದೆ. ಬಾಬಾ ಜೊತೆಗೆ ಸಹಾಯಕನೊಬ್ಬನಿಗೆ ಇರಲು ಅವಕಾಶ ನೀಡಲಾಗಿದೆ. ಹೊರಗಿನಿಂದ ತರಿಸಿದ ಊಟ ಹಾಗೂ ಕುಡಿಯಲು ಮಿನರಲ್ ವಾಟರ್ ವ್ಯವಸ್ಥೆ ಮಾಡಲಾಗಿದೆ. ಇಷ್ಟಿದ್ದರೂ ಬಾಬಾ ನಿದ್ದೆಯಿಲ್ಲದೆ ಜೈಲಿನಲ್ಲಿ ಮೊದಲ ರಾತ್ರಿ ಕಳೆದಿದ್ದಾರೆ. ಅಲ್ಲದೆ ಯಾರೊಂದಿಗೂ ಹೆಚ್ಚು ಮಾತನಾಡಿಲ್ಲ ಎಂದು ವರದಿಯಾಗಿದೆ.

ಅತ್ಯಾಚಾರ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಬಾಬಾ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿವರೆಗೂ ಹೊತ್ತಿ ಉರಿದ ಹರಿಯಾಣದಲ್ಲಿ ಸದ್ಯ ಹಿಂಸಾಚಾರ ನಿಂತಿದೆ. ಆದ್ರೆ ಬೂದಿ ಮುಚ್ಚಿದ ಕೆಂಡದಂತಿದೆ ಪರಿಸ್ಥಿತಿ. ಹೀಗಾಗಿಯೇ ಸಿಎಂ ಕಟ್ಟರ್ ಸರ್ಕಾರ ಶಾಂತಿ ಭದ್ರತೆಗೆ ಕೇಂದ್ರದ ಮೊರೆ ಹೋಗಿದೆ. ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದ್ದು, 350ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪಂಚಕುಲಾ, ಸಿರ್ಸಾದಲ್ಲಿ ಭಕ್ತರ ಸಿಟ್ಟಿಗೆ ನೂರಾರು ವಾಹನ ಸುಟ್ಟು ಕರಕಲಾಗಿವೆ. ಹಿಂಸಾಚಾರದಲ್ಲಿ ತೊಡಗಿದ್ದ ಸಾವಿರಾರು ಬಾಬಾ ಭಕ್ತರನ್ನು ಬಂಧಿಸಲಾಗಿದೆ. ಡೇರಾ ಸಚ್ಚಾ ಸೌಧಕ್ಕೆ ಸೇರಿದ 65 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಬಾನ 6 ಮಂದಿ ಬಾಡಿ ಗಾರ್ಡ್‍ಗಳನ್ನು ಸಹ ಅರೆಸ್ಟ್ ಮಾಡಿದ್ದಾರೆ.  ಈ ನಡುವೆ ವಿದೇಶ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿ ದೆಹಲಿಗೆ ಬಂದ ಕೇಂದ್ರ ಗೃಹಸಚಿವ ರಾಜ್‍ನಾಥ್ ಸಿಂಗ್ ಇಂದು ತುರ್ತು ಸಭೆ ನಡೆಸಲಿದ್ದಾರೆ.

ಕೇಂದ್ರ ಸರ್ಕಾರ ಗುರ್ಮಿತ್ ಬಾಬಾಗೆ ನೀಡಲಾಗಿದ್ದ ಝೆಡ್ ಕ್ಯಾಟಗರಿ ಭದ್ರತೆಯನ್ನ ವಾಪಸ್ ಪಡೆದಿದೆ.

ಇದನ್ನೂ ಓದಿ: ಬಾಬಾ ಭಕ್ತರಿಂದ ಉಂಟಾದ ನಷ್ಟ ಭರಿಸಲು ಡೇರಾ ಆಸ್ತಿ ಮುಟ್ಟುಗೋಲಿಗೆ ಹೈಕೋರ್ಟ್ ಆದೇಶ- ಎಷ್ಟಿದೆ ಗೊತ್ತಾ ಈ ಬಾಬಾ ಆಸ್ತಿ?