Saturday, 24th August 2019

Recent News

12 ಅತೃಪ್ತ ಶಾಸಕರಿಗೆ ಸ್ಪೀಕರ್ ನೋಟಿಸ್

ಬೆಂಗಳೂರು: ಸಿಎಂ ರಾಜೀನಾಮೆ ಕೊಡುವವರೆಗೂ ರಾಜ್ಯಕ್ಕೆ ಬರಬಾರದೆಂದು ನಿರ್ಧಾರ ಮಾಡಿಕೊಂಡು ಮುಂಬೈ ಹೋಟೆಲಿನಲ್ಲಿರುವ ಅತೃಪ್ತ ಶಾಸಕರಿಗೆ ಸ್ಪೀಕರ್ ರಮೇಶ್ ಕುಮಾರ್ ಅವರು ನೋಟಿಸ್ ಕೊಟ್ಟಿದ್ದಾರೆ.

ಸ್ಪೀಕರ್ ಅವರು 12 ಮಂದಿ ಅತೃಪ್ತ ಶಾಸಕರಿಗೆ ಪಕ್ಷಾಂತರ ನಿಷೇಧ ದೂರಿನ ಅರ್ಜಿ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ನಿಮ್ಮನ್ಯಾಕೆ ಅನರ್ಹಗೊಳಿಸಬಾರದು ಎಂದು ಪ್ರಶ್ನೆ ಕೇಳಿ ನೋಟಿಸ್ ಕೊಟ್ಟು ವಿವರಣೆ ನೀಡುವಂತೆ ಸೂಚಿಸಿದ್ದಾರೆ.

ಅತೃಪ್ತ ಶಾಸಕರು ರಾಜ್ಯ, ತಮ್ಮ ಕ್ಷೇತ್ರವನ್ನು ಬಿಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮುಂಬೈಗೆ ಸೇರಿದ್ದಾರೆ. ಆದರೆ ಇದುವರೆಗೂ ಯಾವೊಬ್ಬ ಶಾಸಕರು ರಾಜ್ಯಕ್ಕೆ ವಾಪಸ್ ಬಂದಿಲ್ಲ. ಸ್ಪೀಕರ್ ವಿವರಣೆ ನೀಡುವಂತೆ ಸೂಚಿಸಿದ್ದರೂ ಈ ಶಾಸಕರು ವಿಚಾರಣೆಗೆ ಹಾಜರಾಗುವುದು ಅನುಮಾನ.

ಒಂದು ವೇಳೆ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಅನರ್ಹತೆಗೊಳಿಸಿದರೂ ಈ ಶಾಸಕರು ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಗೆ ಹೋಗಲಿದ್ದಾರೆ. ಈ ಮೊದಲು ಸಲ್ಲಿಸಿದ್ದ ಅರ್ಜಿಯಲ್ಲಿ ರಾಜೀನಾಮೆ ಸಲ್ಲಿಸಿದ ಬಳಿಕ ಈ ಅನರ್ಹತೆ ದೂರು ದಾಖಲಾಗಿದೆ. ನಮ್ಮನ್ನು ಹೆದರಿಸುವ ಉದ್ದೇಶದಿಂದಲೇ ಈ ದೂರು ನೀಡಲಾಗಿದೆ. ರಾಜೀನಾಮೆ ನೀಡಿದ ಬಳಿಕ ಅನರ್ಹತೆ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಅತೃಪ್ತ ಶಾಸಕರು ಸುಪ್ರೀಂಗೆ ತಿಳಿಸಿದ್ದರು.

ಪಕ್ಷೇತರರಾದ ಆರ್ ಶಂಕರ್ ಮತ್ತು ನಾಗೇಶ್ ರಾಜೀನಾಮೆ ನೀಡಿರುವ ಅತೃಪ್ತರ ಶಾಸಕರು ಅರ್ಜಿ ವಿಚಾರಣೆ ಇಂದು ಸುಪ್ರೀಂನಲ್ಲಿ ಬರಲಿದೆ. ರಾಜೀನಾಮೆ ನೀಡಿದ ಶಾಸಕರ ಮೇಲೆ ಒತ್ತಡ ಹೇರಲಾಗುತ್ತಿದೆ. ಹೊಸದಾಗಿ ಕ್ರಮಬದ್ಧವಾಗಿ ರಾಜೀನಾಮೆ ಸ್ವೀಕರಿಸಿದರೂ ಸ್ಪೀಕರ್ ಅಂಗೀಕರಿಸಿಲ್ಲ. ಇದರ ಹಿಂದೆ ಶಾಸಕರನ್ನು ಅನರ್ಹಗೊಳಿಸುವ ಪ್ಲಾನ್ ಇದೆ. ಹೀಗಾಗಿ ಇಂದು ಸಂಜೆಯೊಳಗೆ ವಿಶ್ವಾಸಮತ ಸಾಬೀತಿಗೆ ಸೂಚಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಅರ್ಜಿಗಳ ವಿಚಾರಣೆ ನಡೆಯಲಿದೆ. ಕೋರ್ಟ್ ಕಲಾಪ ಆರಂಭವಾಗುತ್ತಲೇ ವಕೀಲರು ಈ ವಿಷಯ ಪ್ರಸ್ತಾಪಿಸಲಿದ್ದು, ತ್ರಿಸದಸ್ಯ ಪೀಠ ತುರ್ತು ವಿಚಾರಣೆಗೆ ಒಪ್ಪಿದಲ್ಲಿ ದೋಸ್ತಿ ಸರ್ಕಾರದ ಭವಿಷ್ಯ ಇಂದೇ ನಿರ್ಧಾರವಾಗಲಿದೆ.

Leave a Reply

Your email address will not be published. Required fields are marked *