Wednesday, 11th December 2019

ಡೋಂಟ್ ಟಚ್ ಮೈ ಸ್ಟಾಫ್: ವಿರೋಧ ಪಕ್ಷದ ಸದಸ್ಯರಿಗೆ ಸ್ಪೀಕರ್ ಓಂ ಬಿರ್ಲಾ ಎಚ್ಚರಿಕೆ

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ವಿರೋಧ ಪಕ್ಷದ ಸದಸ್ಯರಿಗೆ ಡೋಂಟ್ ಟಚ್ ಮೈ ಸ್ಟಾಫ್ ಎಂದು ಗುಡುಗಿದ ಪ್ರಸಂಗ ಶುಕ್ರವಾರ ಅಧಿವೇಶನದಲ್ಲಿ ನಡೆದಿದೆ.

ಪ್ರಶ್ನೋತ್ತರ ವೇಳೆ ಕಾಂಗ್ರೆಸ್, ಡಿಎಂಕೆ, ಟಿಎಂಸಿ ನಾಯಕರುಗಳು ಕರ್ನಾಟಕದ ರಾಜಕೀಯ ಬಿಕ್ಕಟ್ಟಿನ ವಿಚಾರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಳಿಕ ಸದನದ ಬಾವಿಗೆ ಇಳಿದು ಪ್ರತಿಭಟನೆ ಆರಂಭಿಸಿದರು. ಇದಕ್ಕೆ ಆಸ್ಪದ ನೀಡದ ಓಂ ಬಿರ್ಲಾ ಅವರು, ನಿಮ್ಮ ಸ್ಥಾನಗಳಿಗೆ ಹೋಗಿ ಕುಳಿತುಕೊಳ್ಳಿ ಎಂದು ಪ್ರತಿಭಟನಾನಿರತ ಸದಸ್ಯರಿಗೆ ಸೂಚನೆ ನೀಡಿದರು. ಆದರೆ ಪ್ರತಿಪಕ್ಷದ ಸದಸ್ಯರು ನಮಗೆ ನ್ಯಾಯ ಬೇಕು, ತಾನ್ ಶಾಹಿ ನಹಿ ಚಲೇಗಿ ಎಂದು ಘೋಷಣೆ ಕೂಗಲು ಆರಂಭಿಸಿದರು.

ಪ್ರತಿಪಕ್ಷದ ಸದಸ್ಯರ ಘೋಷಣೆ ಜೋರಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಸ್ಪೀಕರ್, ಸದನದಲ್ಲಿ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಎತ್ತಬೇಡಿ. ಇದು ಕರ್ನಾಟಕಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಅದರಲ್ಲೂ ಪ್ರಮುಖವಾಗಿ ಸಂವಿಧಾನಿಕ ಹುದ್ದೆಗೆ ಸಂಬಂಧಪಟ್ಟದ್ದಾಗಿದೆ ಎಂದು ಹೇಳಿದರು.

ಪ್ರತಿಪಕ್ಷ ನಾಯಕರ ಪ್ರತಿಭಟನೆ ಮಾತ್ರ ಮುಂದುವರಿದಿತ್ತು. ಸ್ವಲ್ಪ ಸಮಯದ ನಂತರ ಸ್ಪೀಕರ್ ಓಂ ಬಿರ್ಲಾ ಅವರು, ಪ್ರಶ್ನೋತ್ತರ ಅವಧಿಯ ಚರ್ಚೆ ನಡೆಸಲು ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದರು.

ಬಳಿಕ ಮಾತನಾಡಿದ ಓಂ ಬಿರ್ಲಾ ಅವರು, ಕರ್ನಾಟಕ ರಾಜಕೀಯ ಬೆಳವಣಿಗೆ ವಿಚಾರವಾಗಿ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಚರ್ಚೆ ಮಾಡಲು ಈ ಹಿಂದಿನ ಎರಡು ಬಾರಿ ಅವಕಾಶ ನೀಡಿದ್ದೆ ಎಂದು ಪ್ರಸ್ತಾಪಿಸಿದರು. ಇದರಿಂದಾಗಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ವಿರೋಧ ಪಕ್ಷದ ಸದಸ್ಯರು ತಮ್ಮ ಆಸನದ ಕಡೆಗೆ ಮರಳಿದರು.

Leave a Reply

Your email address will not be published. Required fields are marked *