Saturday, 7th December 2019

Recent News

ಎಸ್‍ಪಿ ಜೊತೆ ಮೈತ್ರಿ ರಚಿಸಿದ್ದು ದೊಡ್ಡ ತಪ್ಪು: ಮಾಯಾವತಿ

– ಅಖಿಲೇಶ್ ಯಾದವ್ ಅಪಕ್ವತೆಯಿಂದಾಗಿ ಸೋಲು
– ಮುಂದಿನ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ
– ಮುಲಾಯಂ ಪರ ಮತ ಕೇಳಬಾರದಿತ್ತು

ಲಕ್ನೋ: ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸಮಾಜವಾದಿ ಪಾರ್ಟಿ(ಎಸ್‍ಪಿ) ಮತ್ತು ಬಹುಜನ ಸಮಾಜವಾದಿ ಪಾರ್ಟಿ(ಬಿಎಸ್‍ಪಿ) ನಾಯಕರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಚುನಾವಣಾ ಪೂರ್ವ ಮೈತ್ರಿ ರಚಿಸಿಕೊಂಡು ಕಣಕ್ಕಿಳಿದಿದ್ದ ಎರಡೂ ಪಕ್ಷಗಳು ಭಾರೀ ಹಿನ್ನಡೆಯನ್ನು ಅನುಭವಿಸಿದೆ. ಹೀಗಾಗಿ ಎರಡೂ ಪಕ್ಷಗಳ ನಾಯಕರು ಇಷ್ಟು ದಿನ ಬಹಿರಂಗವಾಗಿ ಸೋಲಿಗೆ ಮೈತ್ರಿಯೇ ಕಾರಣ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿಕೊಂಡು ಬಂದಿದ್ದರು. ಇದೀಗ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಎಸ್‍ಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ದೊಡ್ಡ ತಪ್ಪೆಂದು ನೇರವಾಗಿ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಮುಂದಿನ ವಿಧಾನಸಭೆಯ ಉಪ ಚುನಾವಣೆಯಲ್ಲಿ ಬಿಎಸ್‍ಪಿ ಏಕಾಂಗಿ ಸ್ಪರ್ಧಿಸಲಿದೆ ಎಂಬ ಅಂಶವನ್ನು ಮಾಯಾವತಿ ರಿವೀಲ್ ಮಾಡಿದ್ದಾರೆ. ಇದೇ ವೇಳೆ ಎಸ್‍ಪಿ ಮತ್ತು ನಾಯಕ ಮುಲಾಯಂ ಸಿಂಗ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಲೋಕಸಮರದ ಫಲಿತಾಂಶದ ಬಳಿಕ ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಒಂದು ಬಾರಿ ಕರೆ ಮಾತನಾಡಿಲ್ಲ ಎಂದು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.

ಭಾನುವಾರ ಪಕ್ಷದ ಸಂಸದರು, ಶಾಸಕರು ಮತ್ತು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಪಕ್ಷದ ಮುಖ್ಯಸ್ಥೆಯಾಗಿರುವ ಮಾಯಾವತಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬಾರದಿತ್ತು. ಚುನಾವಣೆ ಸಂಬಂಧಿಸಿದ ನಿರ್ಣಯ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದೇವೆ ಎಂದು ಸಭೆಯಲ್ಲಿ ಹೇಳಿದ್ದಾರೆಂದು ಮಾಧ್ಯಮಗಳು ಬಿತ್ತರಿಸಿವೆ.

 

ಅಖಿಲೇಶ್ ಅಪರಿಪಕ್ವತೆಯ ನಾಯಕತ್ವ:
ಅಖಿಲೇಶ್ ಯಾವದ್ ಅವರ ಅಪರಿಪಕ್ವತೆಯ ನಾಯಕತ್ವದಿಂದಲೇ ಸ್ಪರ್ಧಿಸಿದ್ದ ಬಹು ಕ್ಷೇತ್ರಗಳಲ್ಲಿ ಸೋಲು ಕಾಣಬೇಕಾಯ್ತು. ಹಾಗಾಗಿ ಮುಂದಿನ ದಿನಗಳಲ್ಲಿ ಎಸ್‍ಪಿ ಜೊತೆ ಮೈತ್ರಿ ಉಳಿಸಿಕೊಳ್ಳುವ ಅಗತ್ಯ ಇಲ್ಲ. ಎಸ್‍ಪಿ ಸಹಯೋಗದಿಂದಲೇ ಬಿಎಸ್‍ಪಿ 10 ಸಂಸದರು ಗೆಲುವು ಕಂಡಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ರಾಜ್ಯದಲ್ಲಿ ಹರಡಲಾಗುತ್ತಿದೆ. ಹಾಗಾದರೆ ಯಾದವ್ ಕುಟುಂಬಸ್ಥರು ಚುಬನಾವಣೆಯಲ್ಲಿ ಸೋತಿದ್ದು ಯಾಕೆ ಎಂದು ಮಾಯಾವತಿ ಪ್ರಶ್ನೆ ಮಾಡಿದ್ದಾರೆ.

ತಾಜ್ ಕಾರಿಡಾರ್ ಹಗರಣದಲ್ಲಿ ನನ್ನನ್ನು ಸಿಲುಕಿಸಲು ಕೇವಲ ಬಿಜೆಪಿ ಪ್ರಯತ್ನ ಮಾಡಿರಲಿಲ್ಲ. ಅದರಲ್ಲಿ ಮುಲಾಯಂ ಸಿಂಗ್ ಯಾದವ್ ಸಹ ಒಬ್ಬರಾಗಿದ್ದರು. ಇಂತಹ ಘಟನೆಗಳನ್ನು ಮರೆತು ಚುನಾವಣೆಯಲ್ಲಿ ಮುಲಾಯಂ ಸಿಂಗ್ ಪರ ಮತ ಯಾಚನೆ ಮಾಡಿದ್ದನ್ನು ಅಖಿಲೇಶ್ ಯಾವದ್ ಪರಿಗಣಿಸಲಿಲ್ಲ. ಲೋಕಸಮರದ ಫಲಿತಾಂಶದ ಬಳಿಕ ಅಖಿಲೇಶ್ ಯಾದವ್ ಒಂದು ಬಾರಿಯೂ ಕರೆ ಮಾಡಿ ಮಾತನಾಡಲಿಲ್ಲ. ಕೊನೆಗೆ ನಾನೇ ಕರೆ ಮಾಡಿ ಕುಟುಂಬಸ್ಥರೊಂದಿಗೆ ಮಾತನಾಡಿದೆ ಎಂದರು.

ಎಸ್‍ಪಿ ಮತ ನಮ್ಗೆ ಬಂದಿಲ್ಲ:
ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದರೂ ಸಮಾಜವಾದಿ ಪಕ್ಷದ ಮತಗಳು ನಮ್ಮ ಅಭ್ಯರ್ಥಿಗಳಿಗೆ ಬಂದಿಲ್ಲ. ಹಾಗಾಗಿ ಈ ಮಹಾಮೈತ್ರಿ ಮೊದಲಿನಂತೆ ಮುಂದುವರಿಯುವುದು ಅನುಮಾನ. ಆದ್ರೆ ಬಿಎಸ್‍ಪಿಯ ಬಹುತೇಕ ಮತಗಳು ಎಸ್‍ಪಿ ಅಭ್ಯರ್ಥಿಗಳು ಪಾಲಾಗುವಂತೆ ನಮ್ಮ ಕಾರ್ಯಕರ್ತರು ತಳಮಟ್ಟದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈ ವಿಷಯಗಳ ಬಗ್ಗೆ ಅಖಿಲೇಶ್ ಗೆ ತಿಳಿದಿದ್ದರೂ ಮೌನವಾಗಿದ್ದಾರೆ. ಉಪಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ನಾವು ಗೆಲುವು ಕಾಣಬೇಕಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *