Tuesday, 20th August 2019

ಶಿಕ್ಷಕಿಯ ಮೇಲೆ 2 ವರ್ಷಗಳಿಂದ ಅತ್ಯಾಚಾರವೆಸಗಿದ್ದ ಪ್ರಾಂಶುಪಾಲ ಅರೆಸ್ಟ್

– ಪಾನೀಯದಲ್ಲಿ ಮತ್ತು ಬರುವ ಔಷಧಿ ಹಾಕಿ ರೇಪ್

ನವದೆಹಲಿ: ಶಿಕ್ಷಕಿಯ ಮೇಲೆ ಕಳೆದ 2 ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗಿದ್ದ ಪ್ರಾಂಶುಪಾಲನನ್ನು ದೆಹಲಿ ಪೊಲೀಸರು ಗುರುವಾರ ಬಂದಿಸಿದ್ದಾರೆ.

ದಕ್ಷಿಣ ದೆಹಲಿಯ ಜಸೋಲ ಖಾಸಗಿ ಶಾಲೆಯ ಪ್ರಾಂಶುಪಾಲ ರಾಕೇಶ್ ಸಿಂಗ್ ಬಂಧಿತ ಪ್ರಾಂಶುಪಾಲ. 27 ವರ್ಷದ ಸಂತ್ರಸ್ತೆ ಬುಧವಾರ ನೀಡಿದ್ದ ದೂರು ಪಡೆದ ಪೊಲೀಸರು ಆರೋಪಿ ರಾಕೇಶ್ ಸಿಂಗ್‍ನನ್ನು ಬಂಧಿಸಿದ್ದಾರೆ.

ಆಗಿದ್ದೇನು?:
ಪ್ರಾಶುಂಪಾಲ ರಾಕೇಶ್ ಸಿಂಗ್ 2017ರ ಜೂನ್‍ನಲ್ಲಿ ಶಾಲಾ ಅವಧಿಯ ಬಳಿಕ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುವಂತೆ ಸಂತ್ರಸ್ತೆಯನ್ನು ಕರೆದಿದ್ದನು. ನಂತರ ಶಿಕ್ಷಕಿಯನ್ನು ತನ್ನ ಕಚೇರಿಗೆ ಕರೆದುಕೊಂಡು ಹೋಗಿ ಮತ್ತು ಬರುವ ಔಷಧ ಬೆರೆಸಿದ ಪಾನೀಯ ನೀಡಿದ್ದನು. ಇದನ್ನು ಕುಡಿದ ಶಿಕ್ಷಕಿ ಪ್ರಜ್ಞೆ ತಪ್ಪಿ ಬಿದ್ದ ವೇಳೆ ರಾಕೇಶ್ ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ ಈ ದೃಶ್ಯವನ್ನು ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಪೊಲೀಸ್ ಆಯುಕ್ತ ಚಿನ್ಮೊಯ್ ಬಿಸ್ವಾಲ್ ತಿಳಿಸಿದ್ದಾರೆ.

ಪ್ರಾಂಶುಪಾಲ ತನ್ನ ಬಳಿ ಇದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಈ ಮೂಲಕ ಕಳೆದ 5 ವರ್ಷಗಳಿಂದ ಶಾಲೆಯ ಆವರಣದಲ್ಲಿ ಅತ್ಯಾಚಾರ ಎಸಗಿದ್ದಾನೆ. ಆರೋಪಿಗೆ ಇಬ್ಬರು ಸಹ ಶಿಕ್ಷಕರು ಸಹಾಯ ಮಾಡಿದ್ದಾರೆ. ನಾನು ಗರ್ಭಿಣಿಯಾದಾಗ ಮಗುವನ್ನು ತೆಗೆಸುವಂತೆ ಒತ್ತಾಯಿಸಿದ್ದರು ಎಂದು ಸಂತ್ರಸ್ತೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎಂದು ಚಿನ್ಮೊಯ್ ಬಿಸ್ವಾಲ್ ವಿವರಿಸಿದ್ದಾರೆ.

ಈ ಸಂಬಂಧ ಸಂತ್ರಸ್ತೆಯು ಸಾವಿತ್ರಿ ವಿಹಾರ್ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ. ಆರೋಪಿ ರಾಕೇಶ್ ಸಿಂಗ್‍ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *