Connect with us

Bollywood

ದಕ್ಷಿಣ ಆಫ್ರಿಕಾ ತಂಡ ಉಳಿದಿದ್ದ ಹೋಟೆಲಿನಲ್ಲಿಯೇ ಕನಿಕಾ ವಾಸ್ತವ್ಯ

Published

on

ಮುಂಬೈ: ಕೊರೊನಾ ಸೋಂಕಿಗೆ ಒಳಗಾಗಿರುವ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಉಳಿದುಕೊಂಡಿದ್ದ ಹೋಟೆಲಿನಲ್ಲಿಯೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ವಾಸ್ತವ್ಯ ಹೂಡಿತ್ತು.

ಲಕ್ನೋ ನಗರದ ಫೈವ್ ಸ್ಟಾರ್ ಹೋಟೆಲಿನಲ್ಲಿ ಮಾರ್ಚ್ 14 ರಿಂದ 16ರವರೆಗೆ ಉಳಿದುಕೊಂಡಿದ್ದರು. ಎರಡನೇ ಏಕದಿನ ಪಂದ್ಯ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಎಲ್ಲ ಸದಸ್ಯರು ಪ್ರತ್ಯೇಕ ಕೋಣೆಗಳಲ್ಲಿಯೇ ಉಳಿದುಕೊಂಡಿದ್ದರು. ಕೊರೊನಾ ಆತಂಕದಿಂದ ಪಂದ್ಯ ರದ್ದಾಗಿದ್ದರಿಂದ ತಂಡದ ಸದಸ್ಯರು ತಮ್ಮ ದೇಶಕ್ಕೆ ಹಿಂದಿರುಗಿದ್ದಾರೆ. ಕನಿಕಾ ಸಹ ಅದೇ ಹೋಟೆಲಿನಲ್ಲಿ ಉಳಿದುಕೊಂಡಿರುವ ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ.

ಮಾರ್ಚ್ 14ರಿಂದ 16ರವರೆಗೆ ಹೋಟೆಲಿನಲ್ಲಿ ಉಳಿದುಕೊಂಡಿದ್ದ ಕನಿಕಾ, ಅಲ್ಲಿಯ ಲಬಿಯಲ್ಲಿ ಊಟ ಸಹ ಮಾಡಿದ್ದರು. ಜೊತೆಗೆ ಹೋಟೆಲಿನಲ್ಲಿ ಅನೇಕರನ್ನು ಭೇಟಿಯಾಗಿದ್ದರು. ಈ ಸಂಬಂಧ ಉತ್ತರ ಪ್ರದೇಶದ ಆರೋಗ್ಯ ಇಲಾಖೆ ಹೋಟೆಲಿನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪರಿಶೀಲನೆ ನಡೆಸುತ್ತಿದೆ. ಸಿಸಿಟಿವಿ ದೃಶ್ಯಗಳ ಮೂಲಕ ಕನಿಕಾ ಭೇಟಿ ಮಾಡಿದ ಜನರನ್ನು ಪತ್ತೆ ಹಚ್ಚುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಕನಿಕಾ ನಿವಾಸದ ಪರಿಸರದಲ್ಲಿ ವಾಸವಾಗಿರುವ ಸುಮಾರು 22 ಸಾವಿರ ಜನರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿ, ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಾರ್ಚ್ 9ರಂದ ಲಂಡನ್ ನಿಂದ ಹಿಂದಿರುಗಿದ್ದ ಕನಿಕಾ, ಲಕ್ನೋ ನಗರದ ಅಪಾರ್ಟ್ ಮೆಂಟಿನಲ್ಲಿ ಉಳಿದುಕೊಂಡಿದ್ದರು. ಇಲ್ಲಿ ಒಟ್ಟು 700 ಕುಟುಂಬಗಳು ವಾಸವಾಗಿವೆ. ಮಾರ್ಚ್ 15ರಂದು ತಾಜ್ ಹೋಟೆಲಿನಲ್ಲಿ ಕಾಂಗ್ರೆಸ್ ಮಾಜಿ ಸಂಸದ ಜಿತಿನ್ ಪ್ರಸಾದ್ ಸಂಬಂಧಿ ಆದೇಶ್ ಸೇಠ್ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಹಲವು ರಾಜಕಾರಣಿಗಳು ಸೇರಿದಂತೆ ಕನಿಕಾ ಕಪೂರ್ ಭಾಗಿಯಾಗಿದ್ದರು. ಇದರಲ್ಲಿ 45 ಜನರದ್ದು ನೆಗಟಿವ್ ರಿಪೋರ್ಟ್ ಬಂದಿದ್ದು, ಮೂವರನ್ನು ಐಸೋಲೇಶನ್ ನಲ್ಲಿರಿಸಲಾಗಿದೆ.