Connect with us

Cricket

ಯುವಿ ನೀನು ನನ್ನ ಸೂಪರ್ ಸ್ಟಾರ್ ಎಂದ ಗಂಗೂಲಿ

Published

on

ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ನೇಮಕ ಬಹುತೇಕ ಖಚಿತವಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಕೂಡ ದಾದಾಗೆ ಶುಭ ಕೋರಿ ಟ್ವೀಟ್ ಮಾಡಿದ್ದು, ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ ಗಂಗೂಲಿ, ನೀನು ನನ್ನ ಸೂಪರ್ ಸ್ಟಾರ್ ಎಂದು ಯುವಿಗೆ ಹೊಗಳಿಕೆ ನೀಡಿದ್ದಾರೆ.

‘ಟೀಂ ಇಂಡಿಯಾ ನಾಯಕತ್ವದಿಂದ ಬಿಸಿಸಿಐ ಅಧ್ಯಕ್ಷವರೆಗೂ ಉತ್ತಮ ವ್ಯಕ್ತಿಯ ಅತ್ಯುತ್ತಮ ಜರ್ನಿ. ಮಾಜಿ ಕ್ರಿಕೆಟ್ ಆಟಗಾರನಾಗಿ ಅವರು ಆಟಗಾರರ ದೃಷ್ಟಿಕೋನವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುತ್ತಾರೆ. ಆಟಗಾರ ಕ್ರಿಕೆಟ್ ಆಡಳಿತಗಾರನಾಗುವುದು ಉತ್ತಮ ಬೆಳವಣಿಗೆ ಎನಿಸುತ್ತಿದೆ. ಆದರೆ ಯೋಯೋ ಟೆಸ್ಟ್ ವೇಳೆ ನೀವು ಬಿಸಿಸಿಐ ಅಧ್ಯಕ್ಷರಾಗಿರಬೇಕಿತ್ತು’ ಎಂದು ಯುವಿ ಟ್ವೀಟ್ ಮಾಡಿದ್ದರು.

ಯುವರಾಜ್ ಸಿಂಗ್‍ರ ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಗಂಗೂಲಿ, ನಿಮ್ಮ ಶುಭಾಶಯಕ್ಕೆ ಧನ್ಯವಾದ. ನೀವು ಭಾರತಕ್ಕಾಗಿ ವಿಶ್ವಕಪ್ ಗೆದ್ದು ತಂದಿದ್ದೀರಿ. ನೀವು ನನ್ನ ಸೂಪರ್ ಸ್ಟಾರ್. ಇದೀಗ ಕ್ರಿಕೆಟ್‍ಗೆ ಒಳ್ಳೆಯ ಕಾಲ ಬರಲಿದೆ ಎಂದು ಹೇಳಿದ್ದಾರೆ.

ಅಂದಹಾಗೇ ಯುವರಾಜ್ ಸಿಂಗ್ ಕ್ಯಾನ್ಸರ್ ನಿಂದ ಬಳುತ್ತಿದ್ದರು ಕೂಡ ವಿಶ್ವಕಪ್ ಟೂರ್ನಿಯನ್ನು ಆಡಿದ್ದರು. 2007 ಮೊದಲ ಟಿ20 ಟೂರ್ನಿ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಯುವಿ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲಯಲ್ಲಿ ಗಂಗೂಲಿ ಅವರು ಯುವರಾಜ್ ಸಿಂಗ್ ಅವರಿಗೆ ಹೆಚ್ಚಿನ ಗೌರವ ನೀಡಿದ್ದಾರೆ.