Connect with us

Cinema

10 ಕೋಟಿ ಬೆಲೆಯ ಆಸ್ತಿ ಅಡವಿಟ್ಟ ಸೋನು ಸೂದ್

Published

on

– ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಕ್ರಮ

ಮುಂಬೈ: ಲಾಕ್‍ಡೌನ್ ವೇಳೆ ವಲಸೆ ಕಾರ್ಮಿಕರಿಗೆ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಬಾಲಿವುಡ್ ನಟ ಸೋನು ಸೂದ್ ನೆರವಾಗಿದ್ದರು. ಈ ಕುರಿತು ಸಾಕಷ್ಟು ಮೆಚ್ಚುಗೆ ಸಹ ವ್ಯಕ್ತವಾಗಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸೋನು ಸೂದ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು 10 ಕೋಟಿ ರೂ.ಆಸ್ತಿಯನ್ನು ಅಡವಿಟ್ಟಿದ್ದಾರೆ.

ಮುಂಬೈನ ವಿವಿಧ ಪ್ರದೇಶಗಳಲ್ಲಿರುವ 8 ಆಸ್ತಿಗಳನ್ನು ಸೋನು ಸೂದ್ ಅಡವಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು 10 ಕೋಟಿ ರೂ. ಅವಶ್ಯವಿದ್ದಿದ್ದರಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಸಾಲ ಪಡೆಯಲು ಜುಹು ಪ್ರದೇಶದಲ್ಲಿನ ಆಸ್ತಿಗಳನ್ನು ಅಡವಿಟ್ಟಿದ್ದು, 2 ಅಂಗಡಿ ಹಾಗೂ 6 ಫ್ಲ್ಯಾಟ್‍ಗಳನ್ನು ಅಡವಿಟ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸೆಪ್ಟೆಂಬರ್ 15ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ನವೆಂಬರ್ 24ರಂದು ರಿಜಿಸ್ಟರ್ ಆಗಿದೆ. ಈ ದಾಖಲೆಯನ್ನಾಧರಿಸಿ ವರದಿ ಮಾಡಲಾಗಿದ್ದು, ಇಸ್ಕಾನ್ ದೇವಸ್ಥಾನದ ಬಳಿ ಎ.ಬಿ.ನಾಯರ್ ರಸ್ತೆಯಲ್ಲಿರುವ ಕಟ್ಟಡವನ್ನು ಸಹ ಅಡಮಾನ ಇಡಲಾಗಿದೆ. ಸಾಲ ಪಡೆಯಲು 5 ಲಕ್ಷ ರೂ.ಗಳ ನೋಂದಣಿ ಮೊತ್ತವನ್ನು ಸಹ ಪಾವತಿಸಲಾಗಿದೆ.

ಆಸ್ತಿಗಳು ಸೋನು ಸೂದ್ ಹಾಗೂ ಅವರ ಪತ್ನಿ ಮಾಲೀಕತ್ವದಲ್ಲೇ ಇರುತ್ತವೆ. ಪ್ರತಿ ತಿಂಗಳು ಬಾಡಿಗೆಯನ್ನು ಸಹ ಪಡೆಯಬಹುದು. ಆದರೆ 10 ಕೋಟಿ ರೂ.ಗಳ ಸಾಲಕ್ಕೆ ಬಡ್ಡಿ ಹಾಗೂ ಅಸಲನ್ನು ಪಾವತಿಸಬೇಕಾಗುತ್ತದೆ.

ತಮ್ಮ ಸಹಾಯದ ಗುಣಗಳ ಮೂಲಕವೇ ಲಾಕ್‍ಡೌನ್ ಸಮಯದಲ್ಲಿ ಹೀರೋ ಆಗಿದ್ದ ಸೋನು ಸೂದ್, ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ನೂರಾರು ವಲಸೆ ಕಾರ್ಮಿಕರು ಅವರ ಊರುಗಳಿಗೆ ತೆರಳಲು ಸಹಾಯ ಮಾಡಿದ್ದಾರೆ. ಅಲ್ಲದೆ ಮಕ್ಕಳ ಓದಿಗೆ, ಹಲವರಿಗೆ ಸರ್ಜರಿ ಸೇರಿದಂತೆ ವಿವಿಧ ರೀತಿಯ ಸಹಾಯವನ್ನು ಮಾಡಿದ್ದಾರೆ. ಈ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ.

ಇತ್ತೀಚೆಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್‍ಡಿಪಿ)ದ ಭಾಗವಾಗಿ ಪ್ರತಿಷ್ಠಿತ ಎಸ್‍ಡಿಜಿ ಸ್ಪೆಷಲ್ ಮಾನವೀಯ ಕಾರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಮೂಲಕ ವಿಶ್ವಸಂಸ್ಥೆ ಮಟ್ಟದಲ್ಲಿ ಸಹ ಸೋನು ಸೂದ್ ಗುರುತಿಸಿಕೊಂಡಿದ್ದು, ಇದೀಗ ಸಹಾಯ ಮಾಡಲು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ತಮ್ಮ ಆಸ್ತಿಗಳನ್ನೇ ಅಡವಿಟ್ಟು ಕಷ್ಟದಲ್ಲಿರುವವರಿಗೆ ಸ್ಪಂದಿಸಲು ಮುಂದಾಗಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in