Connect with us

ಅಮೆರಿಕದಿಂದ ಸೋನಿಯಾ ಗಾಂಧಿ ವಾಪಸ್- ರಾಹುಲ್ ಗಾಂಧಿ ಜೊತೆ ಆಗಮನ

ಅಮೆರಿಕದಿಂದ ಸೋನಿಯಾ ಗಾಂಧಿ ವಾಪಸ್- ರಾಹುಲ್ ಗಾಂಧಿ ಜೊತೆ ಆಗಮನ

ನವದೆಹಲಿ: ವೈದ್ಯಕೀಯ ತಪಾಸಣೆಗಾಗಿ ಅಮೆರಿಕಕ್ಕೆ ತೆರಳಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾರತಕ್ಕೆ ಮರಳಿದ್ದು, ಮಂಗಳವಾರ ಪುತ್ರ ರಾಹುಲ್ ಗಾಂಧಿ ಅವರೊಂದಿಗೆ ಆಗಮಿಸಿದ್ದಾರೆ.

ನಿಗದಿತ ವೈದ್ಯಕೀಯ ತಪಾಸಣೆಗಾಗಿ ಸೋನಿಯಾ ಗಾಂಧಿ ಅವರು ಸೆಪ್ಟೆಂಬರ್ 12ರಂದು ಅಮೆರಿಕಕ್ಕೆ ತೆರಳಿದ್ದರು. ಸೋನಿಯಾ ಗಾಂಧಿ ಅವರು ತುಂಬಾ ದಿನಗಳಿಂದ ತಪಾಸಣೆಗೆ ಒಳಗಾಗಿರಲಿಲ್ಲ. ಹೀಗಾಗಿ ಅಮೆರಿಕಕ್ಕೆ ಹೋಗಿ ತಪಾಸಣೆ ಮಾಡಿಕೊಂಡು ಬಂದಿದ್ದಾರೆ. ಕೊರೊನಾ ಕಾರಣದಿಂದಾಗಿ ಅವರು ಮರಳುವುದು ತಡವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಅಮೆರಿಕಕ್ಕೆ ತೆರಳಿದ್ದರಿಂದ ಸೋನಿಯಾ ಗಾಂಧಿ ಹಾಗೂ ಪುತ್ರ ರಾಹುಲ್ ಗಾಂಧಿ ಅವರು ಅಧೀವೇಶನದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಕೊರೊನಾ ವೈರಸ್ ಹಿನ್ನೆಲೆ ಅಧಿವೇಶನದ ಅವಧಿಯನ್ನು ಮೊಟಕುಗೊಳಿಸಲಾಗಿದ್ದು, ಹೀಗಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಭಾಗವಹಿಸುತ್ತಿಲ್ಲ.

ಕೃಷಿ ಮಸೂದೆ ವಿಚಾರವಾಗಿ ಅಧಿವೇಶನದಲ್ಲಿ ಕೋಲಾಹಲವೇ ಎದ್ದಿದ್ದು, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕೃಷಿ ಮಸೂದೆ ಕುರಿತು ಅಸಮಾಧಾನ ವ್ಯಕ್ತಪಡಿಸಿವೆ. ಅಲ್ಲದೆ ಇಂದು ವಿರೋಧ ಪಕ್ಷಗಳು ರಾಜ್ಯ ಸಭೆ ಅಧಿವೇಶನವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿವೆ.

ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಗುಲಾಮ್ ನಬಿ ಆಝಾದ್ ಈ ಕುರಿತು ಪ್ರತಿಕ್ರಿಯಿಸಿ, ಸದಸ್ಯರ ಅಮಾನತನ್ನು ಹಿಂಪಡೆಯುವ ವರೆಗೆ ನಾವು ನಡಾವಳಿಯನ್ನು ಬಹಿಷ್ಕರಿಸುತ್ತೇವೆ. ಅಲ್ಲದೆ ಸರ್ಕಾರ ನಿಗದಿಪಡಿಸಿದ ಎಂಎಸ್‍ಪಿಗಿಂತ ಕೆಳಗಿನ ರೈತರಿಂದ ಯಾವುದೇ ಖಾಸಗಿ ವ್ಯಕ್ತಿ ಆಹಾರ ಧಾನ್ಯಗಳನ್ನು ಖರೀದಿಸಬಾರದು ಆ ರೀತಿ ಮತ್ತೊಂದು ಮಸೂದೆಯನ್ನು ಸರ್ಕಾರ ತರಬೇಕು ಎಂದು ಆಗ್ರಹಿಸಿವೆ.

ಅಶಿಸ್ತಿನಿಂದ ವರ್ತಿಸಿದ್ದಕ್ಕೆ ಸೋಮವಾರ 8 ಜನ ರಾಜ್ಯಸಭಾ ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಕಾಂಗ್ರೆಸ್‍ನ ರಾಜೀವ್ ಸತವ್, ಸೈಯದ್ ನಜೀರ್ ಹುಸೇನ್, ರಿಪನ್ ಬರೇನ್ ಸೇರಿದಂತೆ ಇತರರನ್ನು ಅಮಾನತುಗೊಳಿಸಲಾಗಿದೆ.

Advertisement
Advertisement