Connect with us

Belgaum

ಪಬ್‍ಜಿ ಆಡಲು ನೆಟ್ ಪ್ಯಾಕ್‍ಗೆ ಹಣ ನೀಡದ್ದಕ್ಕೆ ತಂದೆಯನ್ನೇ ಕತ್ತರಿಸಿ ಕೊಂದ ಮಗ

Published

on

ಬೆಳಗಾವಿ: ಪಬ್‍ಜಿ ಆಡಲು ಇಂಟರ್‌ನೆಟ್ ಪ್ಯಾಕ್ ಹಾಕಿಸಿಕೊಳ್ಳಲು ಹಣ ಕೊಡದಿದ್ದಕ್ಕೆ ಪಾಪಿ ಮಗನೊಬ್ಬ ತಂದೆಯನ್ನೇ ತುಂಡು ತುಂಡಾಗಿ ಕತ್ತರಿಸಿದ ಹೃದಯ ವಿದ್ರಾವಕ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ಈ ಭಯಾನಕ ಘಟನೆ ನಡೆದಿದೆ. ಕಾಕತಿಯ ನಿವಾಸಿ ಶಂಕ್ರಪ್ಪಾ ಕಮ್ಮಾರ(59) ಅವರನ್ನು ರಘುವೀರ್ ಕಮ್ಮಾರ(21) ಕೊಲೆ ಮಾಡಿದ್ದಾನೆ. ಶಂಕ್ರಪ್ಪಾ ಅವರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಮಗ ಪಬ್‍ಜಿ ಆಟಕ್ಕೆ ಹೆಚ್ಚು ಅಡಿಕ್ಟ್ ಆಗಿದ್ದ ಕಾರಣಕ್ಕೆ ತಂದೆ ಹಲವು ಬಾರಿ ಆತನಿಗೆ ಆಡದಂತೆ ಬುದ್ಧಿ ಹೇಳಿದ್ದರು. ಆದರೆ ಮಗ ಮಾತ್ರ ಯಾರ ಮಾತಿಗೂ ಬೆಲೆ ಕೊಡದೆ ಪಬ್‍ಜಿ ಆಡಿಕೊಂಡು ಅದರಲ್ಲೇ ಮುಳುಗಿದ್ದನು.

ಭಾನುವಾರ ರಘುವೀರ್ ನ ಮೊಬೈಲ್‍ನಲ್ಲಿ ಇಂಟರ್‌ನೆಟ್ ಪ್ಯಾಕ್ ಖಾಲಿಯಾಗಿತ್ತು. ಆದ್ದರಿಂದ ಪ್ಯಾಕ್ ಹಾಕಿಕೊಳ್ಳಲು ಆತ ತಂದೆ ಬಳಿ ಹಣ ಕೇಳಿದ್ದನು. ಆದರೆ ತಂದೆ ಹಣ ನೀಡಲು ನಿರಾಕರಿಸಿದ್ದಕ್ಕೆ ಮಗ ಸಿಟ್ಟಿಗೆದ್ದಿದ್ದನು. ಇದೇ ಕೋಪಕ್ಕೆ ರಾತ್ರಿ ತಂದೆ ಮಲಗಿದ್ದಾಗ ಮಾರಕಾಸ್ತ್ರಗಳಿಂದ ಕತ್ತು, ಕಾಲು ಕತ್ತರಿಸಿ ಬೇರ್ಪಡಿಸಿ ವಿಕೃತವಾಗಿ ಮಗ ಕೊಲೆ ಮಾಡಿದ್ದಾನೆ.

ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಕತಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.