Connect with us

Districts

ಉಡುಪಿಯಲ್ಲಿ ಭವಿಷ್ಯದ ಸೈನಿಕರು ಬೀದಿಪಾಲು

Published

on

ಉಡುಪಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸೇನಾ ನೇಮಕಾತಿ ನಡೆಯುತ್ತಿದೆ. ಜಿಲ್ಲಾ ಸರ್ಕಾರಿ ಅಜ್ಜರಕಾಡು ಮೈದಾನದಲ್ಲಿ ನಡೆಯುವ ಈ ಪ್ರಕ್ರಿಯೆಯಲ್ಲಿ ಪ್ರತಿದಿನ ಮೂರು ಸಾವಿರಕ್ಕಿಂತಲೂ ಹೆಚ್ಚು ಯುವಕರು ಪಾಲ್ಗೊಳ್ಳುತ್ತಿದ್ದಾರೆ. ಆಯ್ಕೆ ಪ್ರಕ್ರಿಯೆಗೆ ಬರುವ ಹೊರಜಿಲ್ಲೆಯ ಯುವಕರಿಗೆ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ.

ಭವಿಷ್ಯದ ಸೈನಿಕರು ರಾತ್ರಿ ರಸ್ತೆಬದಿ ಮಲಗಿ ಕತ್ತಲು ಕಳೆಯುತ್ತಿದ್ದಾರೆ. ಒಂದು ದಿನ ಮೊದಲೇ ಉಡುಪಿಗೆ ಬರುವ ಯುವಕರು ಪಾರ್ಕ್ ರಸ್ತೆಬದಿ, ಫುಟ್‍ಪಾತ್ ಮೇಲೆ ಹಗಲು-ರಾತ್ರಿ ಕಳೆಯುತ್ತಿದ್ದಾರೆ. ಅಲ್ಲದೆ ಬೆಳಗ್ಗಿನ ಜಾವ ಬಿರುಬಿಸಿಲಿಗೆ ಒದ್ದಾಡುವ ಯುವಕರನ್ನು ಕಂಡು ಜನ ಉಡುಪಿ ಜಿಲ್ಲಾಡಳಿತದ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಸರಿಯಾದ ವ್ಯವಸ್ಥೆ ಮಾಡಲು ಆಗದಿದ್ದರೆ ಜವಾಬ್ದಾರಿ ಯಾಕೆ ಹೊರಬೇಕು ಎಂದು ಕಿಡಿಕಾರಿದ್ದಾರೆ.

ಜಿಲ್ಲೆಯಲ್ಲಿ ನಡೆಯುವ ಸೇನಾ ನೇಮಕಾತಿ ಪ್ರಕ್ರಿಯೆಗೆ ಯಾವುದೇ ರಾಜಕೀಯ ಪಕ್ಷಗಳು ಸಂಘಟನೆಗಳು ಮೂಲಭೂತ ಸೌಕರ್ಯವನ್ನು ಒದಗಿಸಿಲ್ಲ. ಮಾತು ಎತ್ತಿದರೆ ದೇಶ, ಸೈನಿಕರು ಎಂದು ಉದ್ದುದ್ದ ಭಾಷಣ ಬಿಗಿಯುವವರೂ ಎಲ್ಲವನ್ನೂ ನೋಡಿಯೋ ನೋಡದೆಯೋ ಸುಮ್ಮನಿದ್ದಾರೆ. ಮಾತಿನ ಮಂಟಪ ಕಟ್ಟುವವರು ಎಲ್ಲಿ ಕಣ್ಮರೆಯಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಅಸಮಾಧಾನ ವ್ಯಕ್ತಪಡಿಸಿದರು.

ಮೈದಾನದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದೇವೆ. ಊಟದ ವ್ಯವಸ್ಥೆ ಸರಾಗವಾಗಿ ನಡೆಯುತ್ತಿದೆ. ಮೂರು ಕಡೆ ವಸತಿ ವ್ಯವಸ್ಥೆ ಮಾಡಿದ್ದೇವೆ. ದೇಗುಲದ ಸಭಾಂಗಣ ನಿಗದಿಯಾಗಿದೆ. ಒಂದು ದಿನ ಮೊದಲೇ ಯುವಕರು ಬರುತ್ತಿರುವುದರಿಂದ, ಮೈದಾನದ ಪಕ್ಕದಲ್ಲೇ ಇದ್ದು ಸರತಿ ಸಾಲಿನ ಮೊದಲು ನಿಲ್ಲಲು ಯುವಕರು ಮೈದಾನ ಪಕ್ಕವೇ ಮಲಗುತ್ತಾರೆ ಹೀಗಾಗಿ ಈ ಸಮಸ್ಯೆ ಆಗಿರಬಹುದು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಜಿಲ್ಲಾಡಳಿತಕ್ಕೆ ಹೇಳಿದ್ದಾರೆ.

ಧಾರ್ಮಿಕ, ಸಾರ್ವಜನಿಕ, ರಾಜಕೀಯ ಕಾರ್ಯಕ್ರಮಗಳನ್ನು ಉಡುಪಿಯಲ್ಲಿ ವ್ಯವಸ್ಥಿತವಾಗಿ ನಡೆಸಲಾಗುತ್ತದೆ. ಆದರೆ ಭವಿಷ್ಯದ ಸೈನಿಕರ ವಿಚಾರದಲ್ಲಿ ಸ್ವಯಂಪ್ರೇರಿತವಾಗಿಯೂ ಜನ ಮುಂದೆ ಬಂದಿಲ್ಲ. ಜಿಲ್ಲಾಡಳಿತ ಕರ್ತವ್ಯದ ರೀತಿಯಲ್ಲಿ ಕೆಲಸ ಮಾಡಿ ಕೈ ತೊಳೆದುಕೊಂಡಿದೆ ಎಂದು ಸಾಮಾಜಿಕ ಕಾರ್ಯಕರ್ತರು ಅಸಮಾಧಾನ ಆಕ್ರೋಶಗೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *