Connect with us

Districts

ಹಾಸನ ತಲುಪಿದ ಮೃತ ಸಂದೀಪ್ ಪಾರ್ಥೀವ ಶರೀರ: ಇಂದು ಮಧ್ಯಾಹ್ನ ಅಂತ್ಯಕ್ರಿಯೆ

Published

on

ಹಾಸನ: ಜಮ್ಮುಕಾಶ್ಮೀರದಲ್ಲಿ ಹಿಮಕುಸಿತಕ್ಕೆ ಸಿಲುಕಿ ವೀರಮರಣವನ್ನಪ್ಪಿದ ಯೋಧ ಸಂದೀಪ್ ಪಾರ್ಥೀವ ಶರೀರ ಮಂಗಳವಾರ ತಡರಾತ್ರಿ ತವರು ಜಿಲ್ಲೆ ಹಾಸನಕ್ಕೆ ಆಗಮಿಸಿದೆ. ತಡರಾತ್ರಿ 2.30ಕ್ಕೆ ವಿಶೇಷ ಅಂಬುಲೆನ್ಸ್‍ನಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ಸೈನ್ಯದ ಅಧಿಕಾರಿಗಳ ತಂಡ ಸಂದೀಪ್ ಪಾರ್ಥೀವ ಶರೀರದೊಂದಿಗೆ ಆಗಮಿಸಿದರು.

ಜಿಲ್ಲಾಡಳಿತದ ವತಿಯಿಂದ ಸಂದೀಪ್ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂದೀಪ್ ಪೋಷಕರು, ಶಾಸಕ ಹೆಚ್ ಎಸ್ ಪ್ರಕಾಶ್, ಅಪರ ಜಿಲ್ಲಾಧಿಕಾರಿ ಹಾಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹಾಜರಿದ್ದರು.

ರಾತ್ರಿ ಇಡೀ ಸಂದೀಪ್ ಪಾರ್ಥೀವ ಶರೀರವನ್ನು ಹಾಸನ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇಡಲಾಗಿದ್ದು ಜಿಲ್ಲಾಧಿಕಾರಿ ಕಛೇರಿ ಬಳಿ ಇಂದು ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಬೆಳಗ್ಗೆ 10 ಗಂಟೆಯ ನಂತರ ಪಾರ್ಥೀವ ಶರೀರ ಸ್ವಗ್ರಾಮ ದೇವಿಹಳ್ಳಿಗೆ ಮೆರವಣಿಗೆ ಮುಖಾಂತರ ತೆರಳಲಿದೆ. ನಂತರ ದೇವಾಂಗ ಸಂಪ್ರದಾಯದ ಪ್ರಕಾರ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಅಂತ್ಯಕ್ರಿಯೆ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಯೋಧ ಸಂದೀಪ್ ಮೃತದೇಹ ಬೆಂಗಳೂರಿಗೆ ಬಂದಿಳಿದಾಗ ಸಚಿವ ಎ.ಮಂಜು ಕೂಡ ಜೊತೆಗೇ ಇದ್ದರು. ಮೃತ ಸಂದೀಪ್ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ 25 ಲಕ್ಷ ರೂ., ಒಂದು ಸೈಟ್ ನೀಡಲಾಗುವುದು ಅಂತಾ ಘೋಷಣೆ ಮಾಡಿದ್ರು.