Connect with us

Districts

ಮಗನನ್ನ ಅಪ್ಪನಂತೆ ಸೈನಿಕನನ್ನಾಗಿ ಮಾಡ್ತೀನಿ – ಸ್ವಗ್ರಾಮದಲ್ಲಿ ವೀರಯೋಧನಿಗೆ ಅಂತಿಮ ನಮನ

Published

on

Share this

– ಹುತಾತ್ಮ ಯೋಧನ ಪತ್ನಿ ಶಪಥ

ವಿಜಯಪುರ: ರಕ್ಷಕ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧ ಕಾಶಿರಾಯ ಅವರ ಅಂತ್ಯಕ್ರಿಯೆಯನ್ನು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಇಂದು ಸರ್ಕಾರಿ ಗೌರವದೊಂದಿಗೆ ನಡೆಸಲಾಯಿತು.

ವೀರ ಯೋಧ ಕಾಶಿರಾಯ ಬೊಮ್ಮನಹಳ್ಳಿ ಪಾರ್ಥಿವ ಶರೀರ ಸ್ವಾಗ್ರಾಮಕ್ಕೆ ತರಲಾಗಿತ್ತು. ಪುಲ್ವಾಮಾದಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಕಾಶಿರಾಯ ಬೊಮ್ಮನಹಳ್ಳಿ ಸಾವನ್ನಪ್ಪಿದ್ದರು. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಸ್ವಗ್ರಾಮದಲ್ಲಿ ಜೈಕಾರಗಳೊಂದಿಗೆ ದೇಶಪ್ರೇಮಿಯ ಪಾರ್ಥಿವ ಶರೀರ ಸ್ವಾಗತಿಸಿ, ಉಕ್ಕಲಿ ಗ್ರಾಮದ ಸರಕಾರಿ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಈ ವೇಳೆ ಮಗನನ್ನ ಅಪ್ಪನಂತೆ ಸೈನಿಕ ಮಾಡುವೆ ಎಂದು ಹುತಾತ್ಮ ಯೋಧನ ಪತ್ನಿ ಸಂಗೀತಾ ಪಾರ್ಥಿವ ಶರೀರದ ಎದುರು ನಿಂತು ಶಪಥ ಮಾಡಿದ್ದಾರೆ. ಅವರ ಅಪ್ಪ ಅವನನ್ನ ಸ್ಟ್ರಾಂಗ್ ಮಾಡು ಎನ್ನುತ್ತಿದ್ದರು. ನಾನು ಅವರ ಮಗನನ್ನ ಸ್ಟ್ರಾಂಗ್ ಮಾಡುತ್ತೇನೆ. ಅವರ ಅಪ್ಪ ಹೇಳಿದಂತೆ ಅವನನ್ನು ಸೈನಿಕ ಮಾಡುತ್ತೇನೆ ಎಂದು ಹೇಳುತ್ತಾ ಹುತಾತ್ಮ ಯೋಧನ ಶವದ ಪೆಟ್ಟಿಗೆ ಮೇಲೆ ಬಿದ್ದು ಪತ್ನಿ ಸಂಗೀತಾ ಕಣ್ಣೀರು ಹಾಕಿದ್ದಾರೆ.

ಪತ್ನಿ ಹಾಗೂ ತಾಯಿಗೆ ಯೋಧನ ಪಾರ್ಥಿವ ಶರೀರದ ಮೇಲೆ ಹಾಕಿದ್ದ ರಾಷ್ಟ್ರ ಧ್ವಜ ಹಸ್ತಾಂತರ ಮಾಡಲಾಯಿತು. ಪತ್ನಿ, ಇಬ್ಬರು ಮಕ್ಕಳು ತಾಯಿ ಹಾಗೂ ಸಹೋದರರು, ಯೋಧರು ಪಾರ್ಥೀವ ಶರೀರಕ್ಕೆ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದರು. ಸೇನೆ ಹಾಗೂ ಸ್ಥಳೀಯ ಪೊಲೀಸರಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಲಿಂಗಾಯತ ವಿಧಿವಿಧಾನ ಮೂಲಕ ನಡೆದ ಅಂತ್ಯಕ್ರಿಯೆ ನಡೆಸಲಾಯಿತು.

ಯರನಾಳದ ಮಠದ ಶ್ರೀ ಸಂಗನಬಸವ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಅಂತ್ಯಕ್ರಿಯೆ ವಿಧಿವಿಧಾನ ನಡೆಸಲಾಯಿತು. ಬಸವನಬಾಗೇವಾಡಿ ಮತಕ್ಷೇತ್ರದ ಶಾಸಕ ಶಿವಾನಂದ ಪಾಟೀಲ್, ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ, ಜಿಲ್ಲಾಧಿಕಾರಿ ಸುನೀಲ್‍ಕುಮಾರ್, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಸೇರಿದಂತೆ ಸಾವಿರಾರು ದೇಶಭಕ್ತರು ಅಂತ್ಯಕ್ರಿಯೆಯೆಲ್ಲಿ ಭಾಗಿಯಾಗಿದ್ದರು.

Click to comment

Leave a Reply

Your email address will not be published. Required fields are marked *

Advertisement