Crime
ಸಾಮಾಜಿಕ ಜಾಲತಾಣದ ಗೆಳತಿಯನ್ನು ನಂಬಿ 14 ಲಕ್ಷ ಕಳೆದುಕೊಂಡ ಪ್ರೇಮಿ

ಹುಬ್ಬಳ್ಳಿ: ಫೇಸ್ಬುಕ್ ನಲ್ಲಿ ಪರಿಚಯವಾದ ಯುವತಿಯನ್ನು ನಂಬಿ ಲವ್ ಮಾಡಲು ಹೋಗಿ ಯುವಕನೊಬ್ಬ 14 ಲಕ್ಷ ರೂಪಾಯಿ ಪಂಗನಾಮ ಹಾಕಿಸಿಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಗಂಗಿವಾಳದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಆರೋಪಿ ಪ್ರತಾಪ್ ಡಿ.ಎಂ ಹುಡುಗಿಯ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ರುದ್ರಗೌಡ ಮಲ್ಲನಗೌಡ ಪಾಟೀಲ್ ಅವರಿಗೆ ಸುಶ್ಮಾ ಸುಸು ಎಂಬ ನಕಲಿ ಫೇಸ್ಬುಕ್ ಖಾತೆ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ, ಬಳಿಕ ಪ್ರೀತಿ ಮಾಡುವುದಾಗಿ ಹೇಳಿ ನಂಬಿಸಿದ್ದ.
ಮೂರು ವರ್ಷಗಳಿಂದ ಮೇಸೇಜ್
ಚಾಟಿಂಗ್ ಮಾಡಿದ್ದು, ನಾನು ಮೂಗಿ ಮಾತು ಬರಲ್ಲ ಎಂದು ನಾಟಕವಾಡಿ ಪ್ರೀತಿ ಮಾಡುವುದಾಗಿ ನಂಬಿಸಿದ್ದಾನೆ. ಬಳಿಕ ರುದ್ರಗೌಡ ಮಲ್ಲನಗೌಡ ಪಾಟೀಲ್ ಕಡೆಯಿಂದ ಹಾಗೂ ಪರಿಚಯಸ್ಥರ ಕಡೆಯಿಂದ ಸುಮಾರು 14-15 ಲಕ್ಷ ರೂಪಾಯಿ ಹಣವನ್ನು ಜಮೆ ಮಾಡಿಸಿಕೊಂಡು ವಂಚನೆ ಮಾಡಿದ್ದಾನೆ.
ಮದುವೆ ಮಾಡಿಕೊಳ್ಳುವ ಆಮಿಷವೊಡ್ಡಿ ಹಲವು ಜನರ ಬಳಿ 14ರಿಂದ 15 ಲಕ್ಷ ರೂಪಾಯಿ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದ ಪ್ರತಾಪನ ವಿರುದ್ಧ ರುದ್ರಗೌಡ ಮಲ್ಲನಗೌಡ ಪಾಟೀಲ್ ಅವರು ನೀಡಿದ ದೂರಿನ ಮೇರೆಗೆ ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸೈಬರ್ ಕ್ರೈಂ ಪೋಲೀಸರು, ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ವಂಚಿಸಿದ್ದ ಪ್ರತಾಪ್ ನನ್ನು ಬಂಧಿಸಿ ಬಂಧಿತನಿಂದ 1.25 ಲಕ್ಷ ರೂಪಾಯಿ ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಕೃಷ್ಣಕಾಂತ ಅವರ ಮಾರ್ಗದರ್ಶನದಲ್ಲಿ, ಧಾರವಾಡ ಸೈಬರ್ ಕ್ರೈಂ, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿಜಯ್ ಬಿರಾದಾರ, ಎಎಸ್ಐ ವಿ.ಎಸ್.ಬೆಳಗಾಂವಕರ, ಪಿ.ಜಿ.ಕಾಳಿ, ಆರ್.ಎಸ್.ಜಾಧವ. ಹವಾಲ್ದಾರ್ ಎ.ಎ.ಕಾಕರ, ಬಿ.ಎನ್.ಬಳಗಣ್ಣನವರ, ಎ.ಎಂ.ನವಲೂರ, ಆರ್.ಎನ್.ಕಮದೊಡ, ಪಿ.ಜಿ.ಪಾಟೀಲ್, ಸಿಬ್ಬಂದಿಗಳಾದ ಆರ್.ಎ.ಕಟ್ಟಿ, ಯು.ಎಂ.ಅಗಡಿ, ಬಿ.ಎಸ್.ದೇಮಕ್ಕನವರ ತಂಡ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
