Connect with us

Chikkaballapur

ಹುತ್ತದ ಒಳಗೂ ಬಿಸಿ, ಹೊರಗೂ ಬಿಸಿ- ತಂಪಿಗಾಗಿ ಮನೆ, ದೇಗುಲಗಳತ್ತ ಹಾವುಗಳು

Published

on

– ಉರಗತಜ್ಞರಿಗೆ ಫುಲ್ ಡಿಮ್ಯಾಂಡ್

ಚಿಕ್ಕಬಳ್ಳಾಪುರ: ಬಿಸಿಲ ಧಗೆ ದಿನದಿಂದ ದಿನಕ್ಕೆ ಏರುತ್ತಿದ್ದು, ಮನುಷ್ಯರು ಸೇರಿ ಪ್ರಾಣಿ-ಪಕ್ಷಿಗಳೂ ನೀರಿಗಾಗಿ ಪರದಾಡುತ್ತಿವೆ. ಮತ್ತೊಂದೆಡೆ ವಿಪರೀತ ಸೆಕೆ. ಮನುಷ್ಯರು ಫ್ಯಾನು, ಏಸಿಗಳ ಮೊರೆ ಹೋಗುತ್ತೇವೆ. ಆದ್ರೆ ಪ್ರಾಣಿಗಳು ತಂಪಾದ ಜಾಗವನ್ನು ಹುಡುಕಿಕೊಂಡು ಬರುತ್ತಿವೆ. ಹೀಗೆ ಹಾವುಗಳು ಇದೀಗ ಮನೆ, ದೇವಸ್ಥಾನಕ್ಕೆ ನುಗ್ಗುತ್ತಿವೆ.

ಹೌದು. ಪ್ರಾಣಿ-ಪಕ್ಷಿಗಳು ಬಿಸಿಲ ಧಗೆ ತಡೆದುಕೊಳ್ಳಲು ಆಗದೆ ಎಲ್ಲಿ ನೀರು ಸಿಗುತ್ತೋ, ಎಲ್ಲಿ ತಂಪಾದ ವಾತಾವರಣ ಇದೆಯೋ ಅಲ್ಲಿಗೆ ಹೋಗುತ್ತಿವೆ. ಹೀಗಾಗಿ ಚಿಕ್ಕಬಳ್ಳಾಪುರದಲ್ಲಿ ಹಾವುಗಳ ಕಾಟ ಶುರುವಾಗಿದೆ. ಬಿಸಿಲ ಬೇಗೆ ತಡೆದುಕೊಳ್ಳಲು ಸಾಧ್ಯವಾಗದೇ ದೇಗುಲ, ಮನೆಗಳಿಗೆ ಹಾವುಗಳು ನುಗ್ಗುತ್ತಿವೆ. ಹೀಗೆ ನಾಗರ ಹಾವೊಂದು ಇಲ್ಲಿನ ಶ್ರೀನಿವಾಸ ಸಾಗರ ಬಳಿ ಇರೋ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ಗರ್ಭಗುಡಿಯಲ್ಲಿ ಸೇರಿಕೊಂಡಿದೆ. ಇದನ್ನು ಕಂಡು ಅರ್ಚಕರು ಬೆಚ್ಚಿ ಬಿದ್ದಿದ್ದಾರೆ ಎಂದು ಉರಗ ತಜ್ಞ ಪೃಥ್ವಿರಾಜ್ ತಿಳಿಸಿದ್ದಾರೆ.

ದೇವಸ್ಥಾನದ ಕಥೆ ಒಂದ್ಕಡೆಯಾದರೆ, ಚಿಕ್ಕಬಳ್ಳಾಪುರ ನಗರದ ವಿವಿಧೆಡೆ ಮನೆಗಳಲ್ಲಿ ಇದ್ದಕ್ಕಿದ್ದ ಹಾಗೆ ಹಾವುಗಳು ಪ್ರತ್ಯಕ್ಷವಾಗುತ್ತವೆ. ನೀರಿನ ಸಂಪು, ತೋಟದ ಮನೆ, ನೀರಿನ ಗೇಟ್ ವಾಲ್, ತಂಪಾದ ಸಸಿಗಳ ಮಧ್ಯೆ, ಮನೆ ಕಾಂಪೌಂಡ್ ಹೀಗೆ ಎಲ್ಲೆಂದರಲ್ಲಿ ಹಾವುಗಳು ಕಾಣ ಸಿಗುತ್ತಿವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಹೇಳಿದ್ದಾರೆ.

ಒಟ್ಟಿನಲ್ಲಿ ಬಿಸಿಲಿನ ಝಳಕ್ಕೆ ಹುತ್ತ ಬಿಟ್ಟು ಹೊರ ಬರುತ್ತಿರುವ ಹಾವುಗಳು ಮನೆ ಸೇರಿಕೊಂಡು ಜನರನ್ನು ಭಯಬೀಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇದೀಗ ಜಿಲ್ಲೆಯಲ್ಲಿ ಹಾವುಗಳನ್ನು ಹಿಡಿಯೋ ಉರಗತಜ್ಞರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ ಎನ್ನಲಾಗಿದೆ.