Districts
ಕಾಂಕ್ರೀಟ್ ಎಂಎಲ್ಎ – ಶಿವಲಿಂಗೇಗೌಡ ವಿರುದ್ಧ ಹೆದ್ದಾರಿ ಮಧ್ಯೆ ನಿಂತು ಧಿಕ್ಕಾರ ಕೂಗಿಸಿದ ಸಂತೋಷ್

ಹಾಸನ: ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಕೋರ್ಟ್ ತಡೆ ನೀಡಿದ್ದರಿಂದ ಶಾಸಕ ಶಿವಲಿಂಗೇಗೌಡ ಬೆಂಬಲಿಗರು ನಮ್ಮ ಕಾರ್ಯಕರ್ತರ ಮನೆ ಮುಂದೆ ಪಟಾಕಿ ಹೊಡೆಯುವ ದುಸ್ಸಾಹಸ ಮಾಡಿದ್ದಾರೆ. ಅದನ್ನು ತಡೆ ಹಿಡಿಯುವ ಪ್ರಯತ್ನ ಮಾಡದಿದ್ದರೆ ಕೆಲವೇ ದಿನಗಳಲ್ಲಿ ಶಾಸಕರ ಮನೆ ಮುಂದೆ ಪಟಾಕಿ ಹೊಡೆಯುವ ದಿನ ದೂರವಿಲ್ಲ ಎಂದು ಬಿಎಸ್ವೈ ರಾಜಕೀಯ ಕಾರ್ಯದರ್ಶಿ ಸಂತೋಷ್ ಎಚ್ಚರಿಕೆ ನೀಡಿದ್ದಾರೆ.
ಇಂದು ಹಾಸನ ಜಿಲ್ಲೆ ಅರಸೀಕೆರೆಯ ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಎನ್.ಡಿ.ಪ್ರಸಾದ್ ಮತ್ತು ಸದಸ್ಯರಾದ ಶಿವನ್ರಾಜ್, ಮುರಳಿಧರ್, ರವಿಕುಮಾರ್ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ವೇಳೆ ಅರಸೀಕೆರೆ ಹೆದ್ದಾರಿಯಲ್ಲಿ ನಿಂತು ಶಾಸಕ ಶಿವಲಿಂಗೇಗೌಡ ವಿರುದ್ಧ, ಕಾಂಕ್ರೀಟ್ ಎಂಎಲ್ಎಗೆ ಧಿಕ್ಕಾರ ಎಂದು ಕೂಗಿಸಿದರು.
ಬಳಿಕ ಮಾತನಾಡಿದ ಸಂತೋಷ್, ಅರಸೀಕೆರೆ ನಗರಸಭೆ ಅಧ್ಯಕ್ಷಗಾದಿಗೆ ಎಸ್ಟಿ ಮೀಸಲಾಗಿತ್ತು. ಇದರ ವಿರುದ್ಧ ಶಾಸಕ ಶಿವಲಿಂಗೇಗೌಡ ಕಾನೂನು ಹೋರಾಟ ಮಾಡಿದ್ದರು. 2023ಕ್ಕೆ ಮತ ಚಲಾಯಿಸುವ ಮೂಲಕ ಜನರು ಶಾಸಕರಿಗೆ ಈ ಬಗ್ಗೆ ಕೊಡುತ್ತಾರೆ. ಕೊರೊನಾ ಸೋಂಕು ಹೆಚ್ಚಿದ್ದ ಕಾರಣ ಇಂದಿನ ಕಾರ್ಯಕ್ರಮಕ್ಕೆ 200 ಜನರ ಮೇಲೆ ಬರಬೇಡಿ ಎಂದು ಮನವಿ ಮಾಡಿದ್ದೆವು. ಆದರೆ ಶಾಸಕರು ತಡೆಯಾಜ್ಞೆ ತಂದಿರುವುದರಿಂದ ಎಸ್ಸಿ, ಎಸ್ಟಿ ಜನಾಂಗಕ್ಕೆ ಸಿಟ್ಟು ತರಿಸಿದೆ. ಹೀಗಾಗಿ ಇಷ್ಟು ಜನ ಸೇರಿದ್ದಾರೆ ಎಂದು ತಿಳಿಸಿದರು.
ಶಿವಲಿಂಗೇಗೌಡ ತಂತ್ರ, ಕುತಂತ್ರ ಮಾಡಲು ನಿಪುಣರಿದ್ದಾರೆ. ಈ ಕಾಂಕ್ರೀಟ್ ಎಂಎಲ್ಎ ವಿರುದ್ಧ ಒಬ್ಬೊಬ್ಬರು ಹೋರಾಟ ಮಾಡುತ್ತಾರೆ. ಅದಕ್ಕೆ ಸಂಬಂಧಿಸಿದ ದಾಖಲೆ ಕಲೆ ಹಾಕುತ್ತಿದ್ದೇನೆ. ನನ್ನ ವಿರುದ್ಧ ನಮ್ಮ ಪಕ್ಷದವರು ಬೆಂಗಳೂರು ನಾಯಕರ ಬಳಿ ಹೋಗಿದ್ದರು. ಇದರ ಹಿಂದೆ ಶಾಸಕರ ಕೈವಾಡವಿದೆ. ಅಂದು ಅವರು ಯಾರು ಯಾರಿಗೆ ಬೆಂಗಳೂರಿಗೆ ಹೋಗಲು ವಾಹನ ಸೌಕರ್ಯ ಮಾಡಿಕೊಟ್ಟಿದ್ದರು ಎಂಬ ಮಾಹಿತಿ ಇದೆ ಎಂದು ಸಂತೋಷ್ ಕಿಡಿಕಾರಿದರು. ಇದನ್ನೂ ಓದಿ: ನಗರಸಭೆಗಳ ಅಧ್ಯಕ್ಷ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ – ಹಾಸನದಲ್ಲಿ ಜೆಡಿಎಸ್ ಸಂಭ್ರಮ
