Wednesday, 20th November 2019

ಉತ್ತರ ಕನ್ನಡದಲ್ಲಿ ಬಾಗಿಲು ಮುಚ್ಚಿತು ಕೌಶಲ್ಯಾಭಿವೃದ್ಧಿ ಕೇಂದ್ರ

ಕಾರವಾರ: ಪ್ರಧಾನಿ ಮೋದಿಯವರ ಮಹಾತ್ವಾಕಾಂಕ್ಷಿ ಯೋಜನೆಯಲ್ಲಿ ಕೌಶಲ್ಯ ಭಾರತವೂ ಒಂದು. ಅದಕ್ಕಾಗಿಯೇ ಪ್ರತ್ಯೇಕ ಸಚಿವಾಲಯವನ್ನು ರಚಿಸಿ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್‍ಕುಮಾರ್ ಹೆಗಡೆಯವರನ್ನು ರಾಜ್ಯ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಅವರ ಅವಧಿಯಲ್ಲಿ ಸ್ಥಾಪಿಸಲಾಗಿದ್ದ ಉತ್ತರ ಕನ್ನಡದ ಕೌಶಲ್ಯಾಭಿವೃದ್ಧಿ ಕೇಂದ್ರವೊಂದು ಸದ್ಯ ಬಾಗಿಲು ಮುಚ್ಚಿದೆ.

ಹೌದು, ಅನಂತ್‍ಕುಮಾರ್ ಹೆಗಡೆ ಸಚಿವರಾಗುತ್ತಿದ್ದಂತೆ ಉತ್ತರ ಕನ್ನಡದ ಶಿರಸಿಯ ಯಡಳ್ಳಿಯಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಯಾಗಿತ್ತು. ಆದರೆ ಕೌಶಲ್ಯಾಭಿವೃದ್ಧಿ ಸಚಿವರಾಗಿದ್ದ ಕ್ಷೇತ್ರದಲ್ಲಿಯೇ ಅವರು ಸಚಿವ ಸ್ಥಾನದಿಂದ ಇಳಿದ ನಂತರ ಕೇಂದ್ರ ಬಾಗಿಲುಮುಚ್ಚಿದೆ. ಇಲ್ಲಿ ಯುವಕರಿಗೆ ತರಬೇತಿ ನೀಡುವುದನ್ನು ನಿಲ್ಲಿಸಿ ವರ್ಷವಾಗಿದೆ.

ಸದ್ಯದ ಮಟ್ಟಿಗೆ ಈ ಕಚೇರಿಯಲ್ಲಿ ನೆಪಕ್ಕೆ ಐದು ಜನ ಸಿಬ್ಬಂದಿ ಇದ್ದಾರೆ. ಪ್ರಾರಂಭವಾದ ಒಂದು ವರ್ಷದಲ್ಲಿ 1200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಇಲ್ಲಿ ತರಬೇತಿ ನೀಡಲಾಗಿತ್ತು. ಇದರಲ್ಲಿ ಕೇವಲ 70 ಜನರಿಗೆ ಮಾತ್ರ ರಾಜ್ಯದ ಬೇರೆ ಬೇರೆ ಜಾಗಗಳಲ್ಲಿ ಕೆಲಸ ಸಿಕ್ಕಿವೆ. ಉಳಿದವರು ಇಲ್ಲಿ ತರಬೇತಿ ಪಡೆದಿದ್ದಷ್ಟೇ ಬಂತೆ ವಿನಃ ಕೆಲಸ ದೊರತಿಲ್ಲ.

ಈಗಾಗಲೇ ಈ ಕೇಂದ್ರ ತನ್ನ ಕೆಲಸವನ್ನೇ ನಿಲ್ಲಿಸಿದ್ದು, ಧೂಳು ಹಿಡಿದ ಚೇರುಗಳು, ಕೆಟ್ಟು ನಿಂತ ಕಂಪ್ಯೂಟರ್ ಗಳು, ವಿದ್ಯಾರ್ಥಿಗಳಿಲ್ಲದೆ ಕೇಂದ್ರ ಬಿಕೋ ಎನ್ನುತ್ತಿದ್ದು ಅವ್ಯವಸ್ಥೆಯ ಕೇಂದ್ರವಾಗಿ ಮಾರ್ಪಟ್ಟು ಹೇಳುವವರು ಕೇಳುವವರು ಇಲ್ಲದಂತಾಗಿದೆ. ಕೌಶಲ್ಯಾಭಿವೃದ್ಧಿ ಸಚಿವರಾಗಿದ್ದವರ ಕ್ಷೇತ್ರದಲ್ಲಿಯೇ ಈ ಸ್ಥಿತಿ ನಿರ್ಮಾಣವಾದರೇ ಉಳಿದ ಕೇಂದ್ರಗಳ ಸ್ಥಿತಿ ಹೇಗೆ ಇರಬಹುದು ಎನ್ನುವ ಪ್ರಶ್ನೆ ಹುಟ್ಟುಕೊಂಡಿದೆ.

ಈ ಬಗ್ಗೆ ತಕ್ಷಣ ಕೇಂದ್ರ ಸರ್ಕಾರ ಹಾಗೂ ಇಲ್ಲಿನ ಸಂಸದರು ಗಮನ ಹರಿಸಿ ಕೌಶಲ್ಯಾಭಿವೃದ್ಧಿ ಕೇಂದ್ರದ ಅವ್ಯವಸ್ತೆಯನ್ನು ಸರಿಪಡಿಸಬೇಕು ಎಂದು ಜನ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *