Bidar
ಇರೋನು ಒಬ್ಬನೇ, ನನ್ನ ಮಗನನ್ನು ತಂದು ಕೊಡಿ: ಹತ್ತೊಡಲ ಕಣ್ಣೀರು

– ಎಸ್ಐಟಿ ವಶದಲ್ಲಿದ್ದನಾ ಯುವಕ?
– ಪುತ್ರನ ಮಾಹಿತಿ ತಿಳಿಯದೇ ಆತಂಕದಲ್ಲಿ ಕುಟುಂಬಸ್ಥರು
ಬೀದರ್: ಮಾಜಿ ಸಚಿವರ ಸಿಡಿ ಕೇಸ್ ಸಂಬಂಧ ಬೀದರ್ ಜಿಲ್ಲೆಯ ಮೂವರು ಯುವಕರನ್ನ ಎಸ್ಐಟಿ ವಶಕ್ಕೆ ಪಡೆದಿದೆ ಎನ್ನಲಾಗುತ್ತಿದೆ. ಮೂವರಲ್ಲಿ ಓರ್ವನನ್ನು ವಾಪಸ್ ಕಳುಹಿಸಿದ್ದು, ಗುರುವಾರದಿಂದ ಕಾಣೆಯಾಗಿರುವ ಬಾಲ್ಕಿಯ ಯುವಕನನ್ನ ಎಸ್ಐಟಿ ವಶಕ್ಕೆ ಪಡೆದಿದೆ ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯುವಕನ ಸಾಕು ತಾಯಿ, ಗುರುವಾರ ಬೆಳಗ್ಗೆ 11 ಗಂಟೆಗೆ ಮನೆಯಿಂದ ಹೊರ ಹೋದ ಮಗ ವಾಪಸ್ ಬಂದಿಲ್ಲ. ಪತಿಯನ್ನ ಕಳೆದುಕೊಂಡ ನಾನು ಸೋದರಿಯ ಮಗನನ್ನು ತುಂಬಾ ಕಷ್ಟದಿಂದ ಸಾಕಿದ್ದೇನೆ. ಮಧ್ಯಾಹ್ನ 1 ಗಂಟೆಗೆ ಮನೆಗೆ ಹಿಂದಿರುಗುತ್ತಿದ್ದ ಮಗ ಬರಲಿಲ್ಲ. ಇಂದು ಬೆಳಗ್ಗೆ ಪತ್ರಿಕೆಗಳಲ್ಲಿ ಸುದ್ದಿ ನೋಡಿ ಗ್ರಾಮಸ್ಥರು ಮನೆ ಬಳಿ ಬಂದು ವಿಚಾರಿಸುತ್ತಿದ್ದಾರೆ. ಗುರುವಾರ ಹೋದವನು ಒಂದು ಫೋನ್ ಸಹ ಮಾಡಿಲ್ಲ. ದಯವಿಟ್ಟು ನನ್ನ ಮಗನನ್ನ ತಂದುಕೊಡಿ ಎಂದು ಕೈ ಮುಗಿದು ಕಣ್ಣೀರು ಹಾಕಿದರು. ಇದನ್ನೂ ಓದಿ: ಸಿಡಿ ಹಿಂದೆ ಬಿಜೆಪಿ ಪದಾಧಿಕಾರಿಯ ಕೈವಾಡ – ಯತ್ನಾಳ್
ಲಾಕ್ಡೌನ್ ನಿಂದ ಕೆಲಸ ಹೋಗಿತ್ತು. ಕಳೆದ ಕೆಲ ದಿನಗಳಿಂದ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡಿಕೊಂಡಿದ್ದನು. ಗುರುವಾರ ಎಟಿಎಂ ಕಾರ್ಡ್ ತರೋದಾಗಿ ಹೇಳಿ ಹೋದವನು ನಾಪತ್ತೆಯಾಗಿದ್ದಾನೆ. ಇಲ್ಲಿಯವರೆಗೆ ಮಗ ಎಲ್ಲಿದ್ದಾನೆ ಅನ್ನೋ ಮಾಹಿತಿಯೇ ಗೊತ್ತಾಗುತ್ತಿಲ್ಲ. ನನ್ನ ಜೀವನಕ್ಕೆ ಅವನೇ ದಾರಿ ದೀಪ ಎಂದು ಮಗನ ಫೋಟೋ ಹಿಡಿದು ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಬಂದವರೇ ಮಗನನ್ನ ಕರ್ಕೊಂಡು ಹೋದ್ರು: ಸಿಡಿ ಲೇಡಿ ಗೆಳೆಯನ ತಾಯಿಯ ಕಣ್ಣೀರು
