Connect with us

Districts

ಶಿರಾ ಉಪಕದನದಲ್ಲಿ ವೋಟಿಗಾಗಿ ನೋಟಿನ ಮಳೆ- ವೈರಲ್ ವೀಡಿಯೋ

Published

on

– ಹಣ ಹಂಚಿಸ್ತಿದ್ದಾರಾ ಬಿಜೆಪಿ ಶಾಸಕ ಪ್ರೀತಂಗೌಡ?

ತುಮಕೂರು: ಜಿಲ್ಲೆಯ ಶಿರಾ ಉಪಚುನಾವಣೆ ಕಣ ರಣರಣ ಅಂತಿದೆ. ನಾಯಕರ ಟಾಕ್‍ಫೈಟ್ ಭರ್ಜರಿಯಾಗಿ ನಡೆಯುತ್ತಿದ್ದು, ಈ ನಡುವೆಯೇ ವೋಟಿಗಾಗಿ ನೋಟು ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಮತದಾರರನನ್ನು ಸೆಳೆಯಲು ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ತಮ್ಮ ಬೆಂಬಲಿಗರ ಮೂಲಕ ಹಣ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್, ಬಿಜೆಪಿ ಮಾಡಿದೆ. ಮಹಿಳೆಯರಿಗೆ ಹರಿಶಿಣ-ಕುಂಕುಮದ ಜೊತೆ ಹಣದ ಆಮಿಷ ನೀಡಲಾಗುತ್ತಿದೆ ಎಂಬ ಬಗ್ಗೆ ವಿಡಿಯೋ ಸಮೇತ ಆರೋಪ ಮಾಡಲಾಗಿದೆ. ಸದ್ಯ ಕ್ಷೇತ್ರದಲ್ಲಿ ಹಣ ಹಂಚಿಕೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ಮಹಿಳೆಯರಿಗೆ ಹಣ ಹಂಚಿಕೆ ಮಾಡುತ್ತಿರುವ ಪ್ರೀತಂ ಗೌಡ ಅವರ ಬೆಂಬಲಿಗರು ಎನ್ನಲಾದ ವ್ಯಕ್ತಿಗಳು, ನಮ್ಮ ಎಂಎಲ್‍ಎ ಪ್ರೀತಂ ಗೌಡ ಹೇಳಿದ್ದಾರೆ ಹಣ ಕೊಡೋಕೆ. ಪ್ರತಿ ಚುನಾವಣೆಯಲ್ಲಿ ಬರೀ ಗಂಡಸರಿಗೆ ಕೈಗೆ ಹಣ ಕೊಟ್ಟು ಹೋಗುತ್ತಾರೆ. ತಾಯಂದಿರಿಗೆ ಏನೂ ಕೊಡಲ್ಲ ಮರೆತು ಹೋಗುತ್ತಾರೆ. ಇವತ್ತು 200 ರೂಪಾಯಿ ಕೊಡ್ತಿವಿ, ನಾಳೆ, ಆಚೆ ನಾಳಿದ್ದು ಕೊಡ್ತಿವಿ. ಚುನಾವಣೆ ಹಿಂದಿನ ದಿನನೂ ಕೊಡೋದನ್ನು ಕೊಡ್ತಿವಿ. ದುಡ್ಡು ತಗೊಂಡು ಬಿಜೆಪಿಗೆ ಮತ ಹಾಕಿ ಎಂದು ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ಇತ್ತ ಉಪ ಚುನಾವಣೆ ಹೊತ್ತಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಮಠಗಳ ಮೊರೆ ಹೋಗಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠಕ್ಕೆ ನಿನ್ನೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಭೇಟಿ ನೀಡಿದ್ದರು. ನಂತರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಕಾರಜೋಳ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಂಬೇಡ್ಕರ್‍ಗೆ ಕಾಂಗ್ರೆಸ್ ಮಹಾ ಮೋಸ ಮಾಡಿದೆ. ಕಾಂಗ್ರೆಸ್‍ನವರಿಗೆ ದಲಿತರ ಬಳಿ ಮತ ಕೇಳುವ ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದರು. ಇನ್ನು ಆದಿ ಚುಂಚನಗಿರಿ ಮಠಕ್ಕೂ ಭೇಟಿ ಕೊಟ್ಟ ಅಭ್ಯರ್ಥಿ ರಾಜೇಶ್‍ಗೌಡ, ನಿರ್ಮಲಾನಂದ ಶ್ರೀಗಳ ನೇತೃತ್ವದಲ್ಲಿ 2 ಗಂಟೆಗಳಿಗೂ ಹೆಚ್ಚುಕಾಲ ಕಾಲಭೈರವೇಶ್ವರ ಆರಾಧನೆ ಮಾಡಿದ್ದಾರೆ. ರಾಜೇಶ್‍ಗೌಡಗೆ ಶುಭವಾಗಲಿ ಅಂತ ಶ್ರೀಗಳು ಆರ್ಶೀವಾದ ನೀಡಿದ್ದಾರೆ. ಪೂಜೆ ಬಳಿಕ ಮಾತನಾಡಿದ ರಾಜೇಶ್‍ಗೌಡ, ದಸರಾ ಹಿನ್ನೆಲೆ ಶ್ರೀಗಳ ಭೇಟಿಯಾಗಿದ್ದೇನೆ. ಶಿರಾ ಕ್ಷೇತ್ರದ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಕೆಆರ್ ಪೇಟೆ ಉಪಚುನಾವಣೆಯಲ್ಲಿ ಗೆಲುವು ಪಡೆದ ರೀತಿಯಲ್ಲೇ ಶಿರಾದಲ್ಲೂ ಬಿಜೆಪಿ ಕಮಾಲ್ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

Click to comment

Leave a Reply

Your email address will not be published. Required fields are marked *

www.publictv.in