Monday, 17th February 2020

ಆನೆಗೊಂದಿ ಉತ್ಸವದಲ್ಲಿ ಗಾಯಕ ವಿಜಯ್ ಪ್ರಕಾಶ್‍ಗೆ ಅವಮಾನ

ಕೊಪ್ಪಳ: ಗಾಯಕ ವಿಜಯ್ ಪ್ರಕಾಶ್ ಅವರಿಗೆ ಸನ್ಮಾನ ಮಾಡುವ ವಿಷಯದಲ್ಲಿ ಶಾಸಕ ಮತ್ತು ಜಿಲ್ಲಾಧಿಕಾರಿ ನಡುವೆ ಕಿರಿಕ್ ನಡೆದಿದೆ.

ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವದಲ್ಲಿ ಶಾಸಕ ಮತ್ತು ಡಿಸಿ ನಡುವೆ ರಂಪಾಟ ನಡೆದಿದ್ದು, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮತ್ತು ಡಿಸಿ ಸುನೀಲ್ ಕುಮಾರ್ ನಡುವೆ ಸನ್ಮಾನ ಮಾಡುವ ವಿಚಾರದಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ.

ಶ್ರೀ ಕೃಷ್ಣದೇವರಾಯ ಮುಖ್ಯ ವೇದಿಕೆಯಲ್ಲಿ ಶಾಸಕ ಪರಣ್ಣ ಮುನವಳ್ಳಿ ಬಿಟ್ಟು ಗಾಯಕ ವಿಜಯ್ ಪ್ರಕಾಶ್ ಅವರಿಗೆ ಡಿಸಿ ಸುನೀಲ್‍ಕುಮಾರ್ ಸನ್ಮಾನ ಮಾಡಿದರು. ಸನ್ಮಾನ ಮಾಡಿದ ನಂತರ ಡಿಸಿ ವೇದಿಕೆಯಿಂದ ಹೊರಟು ಹೋದರು. ಡಿಸಿ ವರ್ತನೆಗೆ ಆಕ್ರೋಶಗೊಂಡ ಶಾಸಕ ಪರಣ್ಣ ಅಧಿಕಾರಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದರು.

ಗಾಯಕ ವಿಜಯ ಪ್ರಕಾಶ್ ವೇದಿಕೆ ಮೇಲೆ ಹಾಡುಗಳನ್ನು ಹಾಡುತ್ತಾ ಜನರನ್ನು ರಂಜಿಸುತ್ತಿದ್ದರು. ಆದರೆ ಶಾಸಕ ವೇದಿಕೆ ಮುಂದೆಯೇ ಅಸಮಾಧಾನ ವ್ಯಕ್ತಪಡಿಸಲು ಮುಂದಾದರು. ಸ್ಥಳದಲ್ಲಿ ಇದ್ದ ಎಸ್‍ಪಿ ಜಿ. ಸಂಗೀತಾ, ಎಸಿ ಸಿಡಿ ಗೀತಾ ಅವರು ಶಾಸಕರನ್ನು ಸಮಾಧಾನ ಪಡಿಸಲು ಯತ್ನ ಮಾಡಿದರು. ವೇದಿಕೆ ಮೇಲೆ ಬಂದು ಇನ್ನೊಮ್ಮೆ ಸನ್ಮಾನ ಮಾಡುವಂತೆ ಶಾಸಕರಿಗೆ ಅಧಿಕಾರಿಗಳು ಮನವಿ ಮಾಡಿದರು.

ಅಧಿಕಾರಿಗಳ ಮಾತಿಗೆ ಸೊಪ್ಪು ಹಾಕದೆ ವೇದಿಕೆ ಕೆಳಗಡೆ ಕುಳಿತ ಪರಣ್ಣ ಮುನವಳ್ಳಿ ರಂಪಾಟ ಮಾಡುತ್ತಿದ್ದರು. ಶಾಸಕರ ರಂಪಾಟಕ್ಕೆ ಬೇಸತ್ತು ವಿಜಯ್ ಪ್ರಕಾಶ್ ಕಾರ್ಯಕ್ರಮ ನಿಲ್ಲಿಸಿದರು. ಕೊನೆಗೆ ವೇದಿಕೆಯಿಂದ ಕೆಳಗಡೆ ಇಳಿದು ಬಂದರು. ವೇದಿಕೆ ಮೇಲೆ ಬರುವಂತೆ ಪರಣ್ಣ ಅವರಿಗೆ ಕೈ ಮುಗಿದು ಮನವಿ ಮಾಡಿದರು. ಕೊನೆಗೆ ವೇದಿಕೆ ಮೇಲೆ ಬಂದು ಬೆಂಬಲಿಗರೊಂದಿಗೆ ವಿಜಯ್ ಪ್ರಕಾಶ ಅವರಿಗೆ ಮತ್ತೊಮ್ಮೆ ಶಾಸಕ ಪರಣ್ಣ ಮುನವಳ್ಳಿ ಸನ್ಮಾನ ಮಾಡಿದರು.

Leave a Reply

Your email address will not be published. Required fields are marked *