Connect with us

Corona

10 ವರ್ಷದ ಬಾಲಕಿ ಒಂಟಿ ಕೈಯಲ್ಲಿ ತಯಾರಿಸ್ತಾಳೆ ಮಾಸ್ಕ್

Published

on

– ವಿದ್ಯಾರ್ಥಿನಿಯ ಕಾರ್ಯಕ್ಕೆ ಭಾರೀ ಮೆಚ್ಚುಗೆ

ಉಡುಪಿ: ಮನಸ್ಸಿದ್ದರೆ ಮಾರ್ಗ ಅನ್ನೋ ಗಾದೆ ಮಾತಿನಂತೆ ಇಲ್ಲೊಬ್ಬ ಬಾಲಕಿ ತನ್ನ ಒಂದೇ ಕೈಯಲ್ಲಿ ಮಾಸ್ಕ್ ತಯಾರು ಮಾಡುವ ಮೂಲಕ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ಹೌದು. ಉಡುಪಿಯ ಸಿಂಧೂರಿ(10) ಚಿಕ್ಕಂದಿನಿಂದಲೇ ತನ್ನ ಎಡಗೈ ತೋಳಿನ ಕೆಳ ಭಾಗವನ್ನು ಕಳೆದುಕೊಂಡಿದ್ದಾಳೆ. ಕೊರೊನಾ ಮಹಾಮಾರಿ ವಕ್ಕರಿಸಿದ ಬಳಿಕ ರಕ್ಷಣೆಗಾಗಿ ಇದೀಗ ಈಕೆ ತನ್ನ ಒಂದೇ ಕೈಯಲ್ಲಿ ಸುಮಾರು 15 ಮಾಸ್ಕ್ ತಯಾರಿಸಿದ್ದಾಳೆ. ಅಲ್ಲದೆ ತಾನು ತಯಾರಿಸಿದ ಮಾಸ್ಕ್ ಗಳನ್ನು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರುವ ವಿದ್ಯಾರ್ಥಿಗಳಿಗೆ ಹಂಚಿದ್ದಾಳೆ.

6ನೇ ತರಗತಿಯಲ್ಲಿ ಕಲಿಯುತ್ತಿರುವ ಸಿಂಧೂರಿ, ಕಲ್ಯಾಣಪುರ ಸಂತೆಕಟ್ಟೆಯಲ್ಲಿರುವ ಮೌಂಟ್ ರೋಸರಿ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಸ್ಕೌಟ್- ಬುಲ್ ಬುಲ್ ನಲ್ಲಿ ಸಕ್ರೀಯ ಸದಸ್ಯೆಯಾಗಿದ್ದಾಳೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಹೀಗಾಗಿ ಶಾಲೆಯ ಸ್ಕೌಟ್ ಹಾಗೂ ಗೈಡ್ಸ್ ವತಿಯಿಂದ 1 ಲಕ್ಷ ತಯಾರು ಮಾಡಿ ಜನರಿಗೆ ಹಂಚುವ ಗುರಿ ಹೊಂದಿದೆ.

ಈ ಬಗ್ಗೆ ಮಾತನಾಡಿರುವ ಸಿಂಧೂರಿ, ಸ್ಕೌಟ್ ಹಾಗೂ ಗೈಡ್ಸ್ ವತಿಯಿಂದ 1 ಲಕ್ಷ ಮಾಸ್ಕ್ ತಯಾರು ಮಾಡಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಹಂಚುವ ಗುರಿ ಇದೆ. ಸದ್ಯ ನಾನು 15 ಮಾಸ್ಕ್ ಗಳನ್ನಷ್ಟೇ ಹೊಲಿದಿದ್ದೇನೆ. ನಾನು ಏನೇ ಕೆಲಸ ಮಾಡಬೇಕಾದರೂ ಒಂದು ಕೈ ಮಾತ್ರ ಬಳಸಬಹುದಾಗಿದೆ. ಹೀಗಾಗಿ ಒಂಟಿ ಕೈಯಲ್ಲಿ ಮಾಸ್ಕ್ ತಯಾರಿಸಲು ಮೊದ ಮೊದಲು ನನಗೆ ಮುಜುಗರವಾಗುತ್ತಿತ್ತು. ಆದರೆ ನನ್ನ ತಾಯಿ ನನಗೆ ಮಾಸ್ಕ್ ಸ್ಟಿಚ್ ಮಾಡಲು ಸಹಕರಿಸಿದರು. ಈಗ ನನ್ನ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಿಂಧೂರಿ ತಿಳಿಸಿದ್ದಾಳೆ.

ಸದ್ಯ ಈ ವಿಕಲಚೇತನ ಬಾಲಕಿ ಮಾಸ್ಕ್ ತಯಾರಿದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಈಗಾಗಲೇ 15 ಮಾಸ್ಕ್ ಸ್ಟಿಚ್ ಮಾಡಿಕೊಟ್ಟಿರುವ ತಾಯಿ ಮಗಳ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.