Connect with us

Latest

ಸಿಕ್ಕಿಂನಲ್ಲಿ ಶತಕ ಸಂಭ್ರಮ – ಲೋಕಾರ್ಪಣೆಗೊಂಡಿತು ರಾಜ್ಯದ ಮೊದಲ ವಿಮಾನ ನಿಲ್ದಾಣ: ವಿಶೇಷತೆ ಏನು?

Published

on

ಗ್ಯಾಂಗ್ಟಕ್: ಸಿಕ್ಕಿಂ ರಾಜ್ಯದ ರಾಜಧಾನಿ ಬಳಿಯಿರುವ ಪಾಕ್ಯೊಂಗ್ ನಲ್ಲಿ ರಾಜ್ಯದ ಪ್ರಪ್ರಥಮ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೋದಿ, ಈ ವಿಮಾನ ನಿಲ್ದಾಣ ರೂಪಿಸುವಲ್ಲಿ ಶ್ರಮವಹಿಸಿದ ಎಂಜಿನಿಯರ್ ಗಳನ್ನು ನಾನು ಅಭಿನಂದಿಸುತ್ತೇನೆ. ದೇಶದಲ್ಲಿ ಒಟ್ಟು 100 ವಿಮಾನ ನಿಲ್ದಾಣಗಳನ್ನು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ 35 ವಿಮಾನ ನಿಲ್ದಾಣಗಳು ಕಳೆದ 4 ವರ್ಷದಲ್ಲಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಸಿಕ್ಕಿಂ ರಾಜಧಾನಿ ಗ್ಯಾಂಗ್ಟಾಕ್ ನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಪಾಕ್ಯೊಂಗ್ ನಲ್ಲಿ ಸಿಕ್ಕಿಂ ರಾಜ್ಯದ ಪ್ರಪ್ರಥಮ ನ್ಯೂ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ. ಒಟ್ಟು 605.59 ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. ಈ ವಿಮಾನ ನಿಲ್ದಾಣವು ಈಗಾಗಲೇ ಸಿವಿಲ್ ಏವಿಯೇಷನ್ ಇಲಾಖೆಯ ವಾಣಿಜ್ಯ ಹಾರಾಟದ ಅನುಮತಿಯನ್ನು ಸಹ ಪಡೆದುಕೊಂಡಿದೆ.

ಗೋವಾದ ಬಳಿಕ ದೇಶದ ಎರಡನೇ ಸಣ್ಣ ರಾಜ್ಯವಾಗಿರುವ ಸಿಕ್ಕಿಂಗೆ ಯಾವುದೇ ರೈಲು ಸಂಪರ್ಕವಿಲ್ಲ. ಪಶ್ಚಿಮ ಬಂಗಾಳದ ಬಾಗ್ದೋಗ್ರ ವಿಮಾನ ನಿಲ್ದಾಣ 125 ಕಿ.ಮೀ. ದೂರದಲ್ಲಿದೆ. ಈ ನೂತನ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲಕ್ಕೆ ಸಹಾಯವಾಗಲಿದೆ. ಅಕ್ಟೋಬರ್ 4 ರಿಂದ ವಾಣಿಜ್ಯ ಬಳಕೆಯ ವಿಮಾನಗಳು ಅಧಿಕೃತವಾಗಿ ಹಾರಾಟ ನಡೆಸಲಿದೆ.

ನ್ಯೂ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ವಿಶೇಷತೆಗಳು ಏನು?

1. ಸಮುದ್ರ ಮಟ್ಟದಿಂದ ಸುಮಾರು 4,500 ಅಡಿ ಈ ವಿಮಾನ ನಿಲ್ದಾಣವಿದ್ದು, ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದೇ ಹೆಸರು ಪಡೆದುಕೊಂಡಿದೆ.

2. ಈಶಾನ್ಯ ಭಾರತದ 990 ಎಕರೆ ಅರಣ್ಯ ಪ್ರದೇಶದ ಮಧ್ಯೆ ಈ ವಿಮಾನ ನಿಲ್ದಾಣ ನಿರ್ಮಾಣವಾಗಿದ್ದು, ಸಿಕ್ಕಿಂ ರಾಜಧಾನಿ ಗ್ಯಾಂಗ್ಟಾಕ್‍ನಿಂದ 30 ಕಿ.ಮೀ. ದೂರದಲ್ಲಿದೆ.

3. ದೇಶದ ವಿಮಾನಯಾನ ಇಲ್ಲದ ರಾಜ್ಯವಾಗಿದ್ದ ಸಿಕ್ಕಿಂನಲ್ಲಿ ಇಲ್ಲಿಯವರೆಗೂ ಯಾವುದೇ ವಿಮಾನ ನಿಲ್ದಾಣಗಳಿರಲಿಲ್ಲ. ವಿಮಾನಯಾನಕ್ಕಾಗಿ ಪ್ರಯಾಣಿಕರು 125 ಕಿ.ಮೀ ದೂರದ ಪಶ್ಚಿಮ ಬಂಗಾಳದ ಬಾಗ್ದೋಗ್ರ ವಿಮಾನ ನಿಲ್ದಾಣಕ್ಕೆ ತೆರಳಬೇಕಾಗಿತ್ತು.

4. ಪ್ರಪ್ರಥಮ ಬಾರಿಗೆ ವಾಣಿಜ್ಯ ವಿಮಾನಯಾನ ಸಾರಿಗೆ ಸಂಸ್ಥೆಯಾದ ಸ್ಪೈಸ್‍ಜೆಟ್ 78 ಆಸನಗಳ ಕ್ಯೂ400 ವಿಮಾನವನ್ನು ಅಕ್ಟೋಬರ್ 4 ಹಾರಾಟ ಪ್ರಾರಂಭಿಸಲಿದ್ದು, ಪ್ರತಿನಿತ್ಯ  ಪಾಕ್ಯೊಂಗ್ ನಿಂದ ಕೋಲ್ಕತ್ತ, ದೆಹಲಿ ಮತ್ತು ಗುವಾಹಟಿಗೆ ಸಂಚರಿಸಲಿದೆ.

5. ಅತ್ಯಾಧುನಿಕವಾದ ಎಟಿಸಿ(ಎರ್ ಟ್ರಾಫಿಕ್ ಕಂಟ್ರೋಲ್) ಹಾಗೂ ಫೈರ್ ಸ್ಟೇಷನ್ ವ್ಯವಸ್ಥೆಯನ್ನು ಹೊಂದಿದ್ದು, ಪ್ರಯಾಣಿಕರ ಟರ್ಮಿನಲ್, ಪ್ರಕಾಶಿತ ರನ್ ವೇ ಲೈಟ್ಸ್ ಗಳು ಹಾಗೂ 50 ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ.

6. 80 ಮೀಟರ್ ಉದ್ದದ ತಡೆಗೋಡೆ ನಿರ್ಮಾಣಮಾಡಿದ್ದು, ಈ ಮೂಲಕ ವಿಶ್ವದ ಅತಿ ಎತ್ತರ ತಡೆಗೋಡೆಯನ್ನು ಹೊಂದಿರುವ ವಿಮಾನ ನಿಲ್ದಾಣಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಪಾಕ್ಯೊಂಗ್ ಭಾರತ ಹಾಗೂ ಚೀನಾದ ಗಡಿಯಿಂದ 60 ಕಿ.ಮೀ ಅಂತರದಲ್ಲಿದೆ.

7. ರನ್ ವೇ ಸುಮಾರು 1.75 ಕಿ.ಮೀ ಉದ್ದವಿದ್ದು, 30 ಮೀಟರ್ ಅಗಲವಿದೆ. ಹೀಗಾಗಿ ಈ ವಿಮಾನ ನಿಲ್ದಾಣದಲ್ಲಿ ಸುಮಾರು 116 ಮೀಟರ್ ಉದ್ದದ ವಿಮಾನ ಹಾಗೂ 106 ರಿಂದ 76 ಮೀಟರ್ ಉದ್ದದ ಎಟಿಆರ್-72 ವಿಮಾನಗಳನ್ನು ಸುಲಭವಾಗಿ ಇಳಿಸಬಹುದಾಗಿದೆ.

8. ವಿಮಾನನಿಲ್ದಾಣ ಒಟ್ಟು 3,000 ಚದರ ಮೀಟರ್ ವ್ಯಾಪ್ತಿಯನ್ನು ಒಳಗೊಂಡಿದ್ದು, ಈ ವಿಮಾನ ನಿಲ್ದಾಣಕ್ಕೆ ಸಿಕ್ಕಿಂ ಪೊಲೀಸರು ಭದ್ರತೆ ನೀಡುತ್ತಾರೆ.

9. ಪಾಕ್ಯೊಂಗ್ ವಿಮಾನ ನಿಲ್ದಾಣದ ಉದ್ಘಾಟನೆಯಿಂದ ಸಿಕ್ಕಿಂ ರಾಜ್ಯ ಪ್ರವಾಸೋದ್ಯಮ ಹಾಗೂ ಆರ್ಥಿಕವಾಗಿ ಬೆಳೆಯಲು ಸಹಾಯಕವಾಗಿದೆ.

10. 2009 ರಲ್ಲಿ ಕೇಂದ್ರ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಪಾಕ್ಯೊಂಗ್ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದರು. ಕಾಮಗಾರಿ ಆರಂಭಗೊಂಡ ಬಳಿಕ ಸ್ಥಳಿಯ ನಿವಾಸಿಗಳು ಪರಿಹಾರ ನಿಧಿ ಮತ್ತು ಪುನರ್ವಸತಿ ಕಲ್ಪಿಸುವ ವಿಚಾರವಾಗಿ ಭಾರೀ ಪ್ರತಿಭಟನೆ ನಡೆಸಿದ ಕಾರಣ ನಿರ್ಮಾಣ ಕಾಮಗಾರಿ 2014ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. 2015ರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಸಿಕ್ಕಿಂ ರಾಜ್ಯ ಸರ್ಕಾರಗಳು ಪರಿಹಾರ ನಿಧಿ ವಿಚಾರವಾಗಿ ಒಡಂಬಡಿಕೆ ಪತ್ರ(ಎಂಒಯು) ಸಹಿ ಹಾಕಿದ ಬಳಿಕ ಕಾಮಗಾರಿ ಆರಂಭಗೊಂಡು 9 ವರ್ಷಗಳ ನಂತರ ಉದ್ಘಾಟನೆಯಾಗಿದೆ.

ಏನಿದು ಟೇಬಲ್ ಟಾಪ್ ವಿಮಾನ ನಿಲ್ದಾಣ?
ಸುತ್ತಲೂ ಆಳ ಕಣಿವೆಯಿಂದ ಕೂಡಿ, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗುತ್ತದೆ. ಮಂಗಳೂರು, ಕೇರಳದ ಕೋಝಿಕ್ಕೋಡು ಮಿಜೋರಾಂನ ಲೆಂಗ್‍ಪುಯಿನಲ್ಲಿ ಈ ರೀತಿಯ ವಿಮಾನ ನಿಲ್ದಾಣಗಳನ್ನು ಕಾಣಬಹುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv