Connect with us

Karnataka

ಅನ್ನಭಾಗ್ಯದ ಭಾವನಾತ್ಮಕ ನಂಟು ತೆರೆದಿಟ್ಟು ಎಚ್‍ಡಿಕೆಗೆ ದೀರ್ಘ ಪತ್ರ ಬರೆದ ಮಾಜಿ ಸಿಎಂ

Published

on

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕೊಟ್ಟ ಭರವಸೆಯಂತೆ `ನುಡಿದಂತೆ ನಡೆ’ದಿದ್ದಾರೆ.

ಬಜೆಟ್‍ನಲ್ಲಿ ಅನ್ನಭಾಗ್ಯದ ಅಕ್ಕಿಯ ಪ್ರಮಾಣ ಮತ್ತು ತೈಲ ಬೆಲೆ ಏರಿಕೆಗೆ ಕಾಂಗ್ರೆಸ್‍ನಲ್ಲೇ ಅಸಮಾಧಾನ ಕೇಳಿ ಬಂದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕಾಂಗ ಸಭೆಯಲ್ಲಿ ಶಾಸಕರು ಸಿದ್ದರಾಮಯ್ಯ ಮತ್ತು ಡಿಸಿಎಂ ಪರಮೇಶ್ವರ್ ಮುಂದೆಯೇ ಅಸಮಾಧಾನವನ್ನು ಪ್ರಕಟಿಸಿದ್ದರು.

ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಈ ವಿಚಾರವನ್ನು ನಾನು ಸರ್ಕಾರಕ್ಕೆ ಮುಟ್ಟಿಸುತ್ತೇನೆ ಎಂದು ಹೇಳಿದ್ದರು. ಅದರಂತೆ ಈಗ ನೇರವಾಗಿಯೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಅನ್ನ ಭಾಗ್ಯದ ಅಕ್ಕಿ ಪ್ರಮಾಣವನ್ನು ಏರಿಸಬೇಕು  ಮತ್ತು ತೈಲ ಬೆಲೆ ಮೇಲಿನ ತೆರಿಗೆಯನ್ನು ಇಳಿಸುವಂತೆ ಮನವಿ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ?
ಅನ್ನಭಾಗ್ಯ ಎನ್ನುವುದು ನನ್ನ ಪಾಲಿಗೆ ಕೇವಲ ಒಂದು ಸರ್ಕಾರಿ ಯೋಜನೆಯಲ್ಲ. ಅದು ಬಡಜನರ ಹಸಿವು ನೀಗಿಸುವ ಪುಣ್ಯದ ಕೆಲಸ ಎಂದು ನಾನು ನಂಬಿದವನು. ಬಡವರ ಹಸಿವಿನ ಭವಣೆಯನ್ನು ಕಣ್ಣಾರೆ ಕಂಡ ನನ್ನ ಅನುಭವವೇ ಈ ಯೋಜನೆಯ ಪ್ರೇರಣೆ. ಇದರ ಜತೆಗೆ ನನಗೆ ಭಾವನಾತ್ಮಕ ಸಂಬಂಧವಿದೆ.

ನಮ್ಮ ಒಟ್ಟು ಆಯವ್ಯಯ ಪ್ರಮಾಣವನ್ನು ಗಮನಿಸಿದರೆ ಅನ್ನಭಾಗ್ಯ ಯೋಜನೆ ದುಬಾರಿಯೇನಲ್ಲ. ಐದು ವರ್ಷಗಳ ಅವಧಿಯಲ್ಲಿ ಈ ಯೋಜನೆಗೆ ನಮ್ಮ ಸರ್ಕಾರ ನೀಡಿದ್ದ ಒಟ್ಟು ಹಣ 11,564 ಕೋಟಿ ರೂ.. ಇದರ ಫಲಾನುಭವಿಗಳ ಸಂಖ್ಯೆ 3.85 ಕೋಟಿ. ಜಾತಿ, ಧರ್ಮ, ಪ್ರದೇಶದ ಗಡಿಗಳೆನ್ನಲ್ಲ ಮೀರಿ ಅತ್ಯಂತ ಹೆಚ್ಚು ಫಲಾನುಭವಿಗಳನನ್ನು ತಲುಪುತ್ತಿರುವ ಏಕೈಕ ಯೋಜನೆ ಇದು.

ಇಂದು ನಮ್ಮ ನಾಡಿನಲ್ಲಿ ಯಾರೊಬ್ಬರೂ ಹಸಿದು ಮಲಗುವಂತಹ ಅಸಹಾಯಕ ಪರಿಸ್ಥಿತಿ ಇಲ್ಲ. ಆಹಾರ ಹಕ್ಕನ್ನು ನೀಡಿದ ತೃಪ್ತಿ ನನ್ನದು. ಹಸಿವಿನ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಗೆದ್ದಿದೆ. ಹಸಿವು ಮುಕ್ತ ಕರ್ನಾಟಕ ಸಾಕಾರಗೊಂಡಿದೆ. ಸತತ ಬರಗಾಲ ಹೊರತಾಗಿಯೂ ರೈತರ ಆತ್ಮಹತ್ಯೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಲಸೆ ಕಡಿಮೆಯಾಗಲು ಅನ್ನಭಾಗ್ಯ ಯೋಜನೆ ಮುಖ್ಯ ಕಾರಣವಾಗಿದೆ.

ನೀವು ಮಂಡಿಸಿದ ಹೊಸ ಬಜೆಟ್‍ನಲ್ಲಿ ಅನ್ನಭಾಗ್ಯದ ಅಕ್ಕಿಯ ಪ್ರಮಾಣವನ್ನು 5 ಕೆಜಿಗೆ ಇಳಿಸಿದ್ದು ತಿಳಿದು ಅಚ್ಚರಿಯಾಯಿತು. ಅನ್ನಭಾಗ್ಯ ಯೋಜನೆಗೆ ನಾವು ಬಜೆಟ್‍ನಲ್ಲಿ ನಿಗದಿಪಡಿಸಿದ್ದ ಸಹಾಯಧನ 2,450 ಕೋಟಿ ರೂ. 2 ಕೆಜಿ ಅಕ್ಕಿ ಕಡಿಮೆ ಮಾಡುವುದರಿಂದ ಹೆಚ್ಚೆಂದರೆ 600-700 ಕೋಟಿ ರೂಪಾಯಿ ಉಳಿತಾಯ ಮಾಡಬಹುದು. ಆದರೆ ಈ ಕಡಿತದಿಂದ ಹೆಚ್ಚಾಗಲಿರುವ ಬಡವರ ಕಷ್ಟದ ಪ್ರಮಾಣವನ್ನು ನೀವು ಊಹಿಸಬಲ್ಲಿರಿ ಎಂದು ನಾನು ನಂಬಿದ್ದೇನೆ. ಈಗಾಗಲೇ ಬೇರೆ ಬೇರೆ ಜಿಲ್ಲೆಗಳ ಜನತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವುದನ್ನು ನಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ನನ್ನ ಗಮನಕ್ಕೆ ತಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದ ಪ್ರತಿಯೊಬ್ಬನ ಸದಸ್ಯರಿಗೂ ನೀಡಲಾಗುತ್ತಿದ್ದ ಅಕ್ಕಿಯನ್ನು ತಲಾ 7 ಕೆಜಿ ಯಿಂದ 5 ಕೆಜಿಗೆ ಇಳಿಸುವ ನಿರ್ಧಾರವನ್ನು ಪುನರ್ ಪರಿಶೀಲಿಸಿ ಹಳೆಯ ಪದ್ಧತಿಯನ್ನೇ ಮುಂದುವರೆಸಿಕೊಂಡು ಹೋಗಬೇಕೆಂದು ಕೋರುತ್ತೇನೆ.

ಹಾಗೆಯೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಿತ್ತು. ತೈಲ ಬೆಲೆ ಏರಿಕೆಯನ್ನು ಪ್ರಮುಖ ವಿಷಯವನ್ನಾಗಿ ಮಾಡಿಕೊಂಡು ನಮ್ಮ ಪಕ್ಷ ವಿಧಾನ ಸಭೆ ಚುನಾವಣೆಯಲ್ಲಿ ಹೋರಾಟ ನಡೆಸಿತ್ತು. ಜೊತೆಗೆ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರೂ ಸಹ ಈ ವಿಷಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ನಿಧಾರವನ್ನು ತಾವು ಘೋಷಣೆ ಮಾಡಿದ್ದೀರಿ. ಇದರಿಂದ ಬೆಲೆ ಏರಿಕೆ ಜೊತೆಗೆ ಜನಸಾಮಾನ್ಯದ ಮೇಲು ಪರಿಣಾಮ ಬೀರಲಿದೆ. ಹೀಗಾಗಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಸುವ ತೀರ್ಮಾನದ ಬಗ್ಗೆಯೂ ಮರು ಪರಿಶೀಲನೆ ಮಾಡಬೇಕೆಂದು ಕೋರುತ್ತೇನೆ.