Thursday, 14th November 2019

Recent News

‘ಬರೀ ಕೇಳಬೇಡಯ್ಯ, ಏನ್ ಹೇಳ್ತೀನೋ ಬರೆದುಕೊ’- ತಹಶೀಲ್ದಾರ್ ಮೇಲೆ ಸಿದ್ದು ಗರಂ

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕ್ಷೇತ್ರ ಬಾದಾಮಿಗೆ ಆಗಮಿಸಿದ್ದು, ಮೊದಲಿಗೆ ಮಲಪ್ರಭಾ ಪ್ರವಾಹಕ್ಕೆ ತುತ್ತಾಗಿರುವ ಕರ್ಲಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು.

ಸಿದ್ದರಾಮಯ್ಯ ಅವರು ಆಗಮಿಸುತ್ತಿದಂತೆ ಕರ್ಲಕೊಪ್ಪ ಗ್ರಾಮದಲ್ಲಿ ಮಳೆ ಆರಂಭವಾಯಿತು. ಮಳೆಯಿಂದ ರಕ್ಷಣೆಗಾಗಿ ಅಲ್ಲಿಯೇ ಇದ್ದ ದೇವಸ್ಥಾನದೊಳಗೆ ಸಿದ್ದರಾಮಯ್ಯ ತೆರಳಿದರು. ಆ ಬಳಿಕ ಅಲ್ಲಿಯೇ ಕುಳಿತು, ನೆರೆ ಸಂತ್ರಸ್ತರ ಅಹವಾಲು ಆಲಿಸಿದರು.

ಸಿದ್ದರಾಮಯ್ಯ ಅವರ ಎದುರು ತಮ್ಮ ಅಳಲು ತೊಡಿಕೊಂಡ ಗ್ರಾಮಸ್ಥರು, ಮಳೆಯಿಂದ ನೆಲಕ್ಕೆ ಉರುಳಿದ ಮನೆಗಳ ಸರ್ವೆಯಲ್ಲಿ ಲೋಪವಾಗಿದೆ. ಅಲ್ಲದೇ ತಾತ್ಕಾಲಿಕ ಪರಿಹಾರದಲ್ಲಿ ದೋಷದ ಉಂಟಾಗಿದೆ ಎಂದು ಅಳಲು ತೋಡಿಕೊಂಡರು. ಈ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿದ್ದರಾಮಯ್ಯ ಅವರು, ತಾತ್ಕಾಲಿಕ ಪರಿಹಾರ ಪಡಿತರ ಚೀಟಿ ಆಧರಿಸಿ ವಿತರಿಸಬೇಕು ಎಂದರು. ಈ ವೇಳೆ ಸಿದ್ದರಾಮಯ್ಯರ ಸೂಚನೆಗಳನ್ನು ಪಡೆದ ಅಧಿಕಾರಿ ಕ್ರಮಕೈಗೊಳ್ಳುವುದಾಗಿ ಹೇಳಿದರು. ಆದರೆ ಅಧಿಕಾರಿಯ ಉತ್ತರದಿಂದ ಸಂತೃಪ್ತರಾಗದ ಅವರು, ನಾನು ಹೇಳೋದನ್ನ ಬರೀ ಕೇಳಬೇಡಯ್ಯ, ಏನ್ ಹೇಳ್ತೀನೋ ಅದನ್ನು ಬರೆದುಕೊ. ಸರ್ವೆ ಆದ ಮೇಲೂ ಹಲವರ ಮನೆ ಬಿದ್ದಿವೆ. ಆದ್ದರಿಂದ ರೀ ಸರ್ವೆ ಆಗಬೇಕು. ಒಂದೇ ಮನೆಯಲ್ಲಿ ಅಣ್ಣ-ತಮ್ಮ ಇದ್ದರೆ ಪರಿಹಾರ ಹಂಚಿ, ಒಬ್ಬರಿಗೆ ಪರಿಹಾರ ಕೊಟ್ಟರೆ ಮನೆಯಲ್ಲಿ ಉಳಿದವರು ನಾಮ ಹಾಕಿಕೊಳ್ಳಬೇಕಾ? ಎಂದು ತರಾಟೆಗೆ ತೆಗೆದುಕೊಂಡರು.

ಬಿದ್ದ ಮನೆಯಲ್ಲಿ ಎರಡು ಹಂತದ ಪರಿಹಾರ ನೀಡಿ, ಶೇ. 25ಕ್ಕಿಂತ ಕಡಿಮೆ ಬಿದ್ದಿದ್ದರೆ 50 ಸಾವಿರ ರೂ. ಹಾಗೂ ಶೇ.25 ಕ್ಕಿಂತ ಹೆಚ್ಚು ಹಾನಿಯಾಗಿದ್ದರೆ ಎಲ್ಲಾ ಮನೆಗಳಿಗೂ ಐದು ಲಕ್ಷ ರೂ. ಪರಿಹಾರ ನೀಡಿ. ಇದಕ್ಕೆ ವಿಧಾನಸೌಧದಲ್ಲಿ ಸರ್ಕಾರವೂ ಒಪ್ಪಿಗೆ ನೀಡಿದೆ. ಆ ಪ್ರಕಾರವೇ ಸರ್ವೆ ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

Leave a Reply

Your email address will not be published. Required fields are marked *