Connect with us

Karnataka

ಸ್ವ ಪಕ್ಷೀಯರಿಂದಲೇ ನನಗೆ ಚಾಮುಂಡೇಶ್ವರಿಯಲ್ಲಿ ಸೋಲು: ಸಿದ್ದರಾಮಯ್ಯ

Published

on

– ಚುನಾವಣೆಯಲ್ಲಿ ಅಷ್ಟು ಕೆಟ್ಟದಾಗಿ ಸೋಲ್ತೇನೆ ಅಂದ್ಕೊಂಡಿರಲಿಲ್ಲ
– ಅಷ್ಟು ಕೆಲಸ ಮಾಡಿದ್ದಕ್ಕೆ ನನ್ನನ್ನು ಸೋಲಿಸಿದಿರಾ?
– ಸಮ್ಮಿಶ್ರ ಸರ್ಕಾರ ಬೀಳಲು ಕುಮಾರಸ್ವಾಮಿ ಕಾರಣ
– ಬಾದಾಮಿಯಲ್ಲಿ ಗೆಲ್ಲದಿದ್ದರೆ ನನ್ನ ಭವಿಷ್ಯವೇ ಮಂಕಾಗುತ್ತಿತ್ತು

ಮೈಸೂರು: ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಇಷ್ಟೊಂದು ಕೆಟ್ಟದಾಗಿ ಸೋಲುತ್ತೇನೆ ಅಂತ ಅಂದುಕೊಂಡಿರಲಿಲ್ಲ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲಿನ ಬಗ್ಗೆ ಮೊದಲ ಬಾರಿಗೆ ಸಿದ್ದರಾಮಯ್ಯ ಇಂದು ಮಾತನಾಡಿದರು. ನಾನು ಹಳ್ಳಿಗಳಿಗೆ ಹೋದಾಗ ಜನರೆಲ್ಲ ಪ್ರೀತಿ ತೋರಿಸಿದರು. ಆದರೆ ನನ್ನ ಸೋಲಿಗೆ ನಮ್ಮ ಪಕ್ಷದವರು ಕೂಡ ಕಾರಣರಾದರು. ಪಕ್ಷ ಅಂದರೆ ತಾಯಿ ಇದ್ದ ಹಾಗೆ. ಕ್ಷುಲ್ಲಕ ಕಾರಣಕ್ಕೆ ಪಕ್ಷ ದ್ರೋಹ ಮಾಡಬಾರದು. ಅವರಿಗೆ ಇಷ್ಟ ಇಲ್ಲ ಎಂದರೆ ಪಕ್ಷ ಬಿಟ್ಟು ಹೋಗಬೇಕು. ಪಕ್ಷ ಮುಖ್ಯವೇ ಹೊರತು ವ್ಯಕ್ತಿಗಳಲ್ಲ ಎಂದು ತಿಳಿಸಿದರು.

ನನ್ನನ್ನು ಸೋಲಿಸೋಕೆ ಏನು ಕಾರಣ ಹೇಳಿ ಎಂದು ಸಭೆಯಲ್ಲಿ ಬಹಿರಂಗವಾಗಿ ಚಾಮುಂಡೇಶ್ವರಿ ಕ್ಷೇತ್ರದ ಜನರನ್ನು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ನನ್ನನ್ನು ಸೋಲಿಸೋಕೆ 1,2,3,4 ಅಂತ ಕಾರಣ ಕೊಡಿ. ನನ್ನ ವಿರುದ್ಧ ನಿಂತಿದ್ದ ಅಭ್ಯರ್ಥಿಗಳ ಪ್ಲಸ್ ಪಾಯಿಂಟ್ 1,2,3,4. ಅಂತ ಪಟ್ಟಿ ಕೊಡಿ. ನಾನು ಇಷ್ಟೆಲ್ಲ ಮಾಡಿದ್ದಕ್ಕೆ ಸೋಲಿಸೋದಾ, ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯವಾಗಿ ಪುನರ್ಜನ್ಮ ಜನ್ಮ ಕೊಟ್ಟ ಕ್ಷೇತ್ರ. ಅದೇ ರೀತಿ ರಾಜಕೀಯವಾಗಿ ಅತೀ ವೇದನೆ ನೀಡಿದ ಕ್ಷೇತ್ರವೂ ಚಾಮುಂಡೇಶ್ವರಿಯೇ ಎಂದರು.

ನಾನು ಚಾಮುಂಡೇಶ್ವರಿಯಲ್ಲಿ ಇಷ್ಟು ಕೆಟ್ಟದಾಗಿ ಸೋಲುತ್ತೇನೆಂದು ಅಂದುಕೊಂಡಿರಲಿಲ್ಲ. ನನ್ನ ಸೋಲಿಗೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ನವರು ಕಾರಣ. ನಮ್ಮವರಲ್ಲೇ ಕೆಲವರಿಗೆ ನಾನು ಮತ್ತೆ ಸಿಎಂ ಆಗೋದು ಬೇಕಿರಲಿಲ್ಲ. ನಮ್ಮವರಲ್ಲೇ ಕೆಲವರು ಸಹಿಸದೆ ನನ್ನನ್ನು ಸೋಲುವಂತೆ ಮಾಡಿದರು. ನಾನು ಬಾದಾಮಿಯಲ್ಲಿ ಗೆಲ್ಲದಿದ್ದರೆ ನನ್ನ ರಾಜಕೀಯ ಭವಿಷ್ಯವೇ ಮಂಕಾಗಿ ಹೋಗುತ್ತಿತ್ತು. ನಾನು ಮತ್ತೆ ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಮರ್ಮಾಘಾತ ಮಾತ್ರ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಭಾವನಾತ್ಮಕವಾಗಿ ನುಡಿದರು.

ನಾನು ಬಾದಾಮಿಗೆ ಹೋಗಲಿಲ್ಲ ಆದರೂ ಅಲ್ಲಿನ ಜನ ನನ್ನನ್ನು ಗೆಲ್ಲಿಸಿದರು. ನೀವು ಸೋಲಿಸಿದ ಹಾಗೆ ಅವರೂ ಸೋಲಿಸಿದ್ದರೆ ನನ್ನ ರಾಜಕೀಯ ಭವಿಷ್ಯವೆ ಮಂಕಾಗಿ ಹೋಗುತ್ತಿತ್ತು. ಈ ರಾಜ್ಯದ ಭವಿಷ್ಯ ಏನಾಗುತ್ತಿತ್ತು. ನಾನು ಗೆದಿದ್ದರೆ ಮತ್ತೊಮ್ಮೆ ಸಿಎಂ ಆಗುತ್ತಿದ್ದನೇನೋ. ಮತ್ತೆ ಸಿಎಂ ಆಗುವಂತಹ ಅವಕಾಶವೂ ಇತ್ತು. ಆದರೆ ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನನ್ನ ಸೋಲಿಸಿದರು. 2006 ಉಪ ಚುನಾವಣೆಯಲ್ಲಿನ ಗೆಲುವಿನ ಋಣ ತೀರಿಸೋಕೆ ಬಂದಿದ್ದೆ. ಅದು ನನ್ನ ಕೊನೇ ಚುನಾವಣೆ ಅಂದುಕೊಂಡೇ ಸ್ಪರ್ಧಿಸಿದ್ದೆ. ಆದರೆ ಜನರು ನನ್ನನ್ನು ತಿರಸ್ಕಾರ ಮಾಡಿದರು. ಯಾಕಾಗಿ ತಿರಸ್ಕರಿಸಿದರು ಎಂದು ನೀವೇ ಒಮ್ಮೆ ಯೋಚನೆ ಮಾಡಿ ಎಂದರು.

ಇದೇ ವೇಳೆ ಕಾರ್ಯಕರ್ತರು ಇನ್ನೊಮ್ಮೆ ನೀವೇ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಿ ಎಂದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಇನ್ನೊಂದು ಬಾರಿ ಚೂರಿ ಹಾಕಿದರೆ ಏನೂ ಮಾಡಲಿ ಎಂದರು. ಯಡಿಯೂರಪ್ಪ ಚೆಕ್ ಮೂಲಕ ಲಂಚ ಸ್ವೀಕರಿಸುತ್ತಿದ್ದರು. ಅವರ ಮಗ ವಿಜಯೇಂದ್ರ ಆರ್‍ಟಿಜಿಎಸ್ ಮೂಲಕ ಲಂಚ ಸ್ವೀಕರಿಸುತ್ತಿದ್ದಾನೆ. ಆದರೆ ಅವನಿಗೆ ಜೈಕಾರ ಹಾಕುತ್ತಾರೆ. ಅವನು 7.40 ಕೋಟಿ ರೂ.ಗಳನ್ನು ಆರ್‍ಟಿಜಿಎಸ್ ಮೂಲಕ ಲಂಚ ಸ್ವೀಕಾರ ಮಾಡಿದ್ದ. ಇನ್ನಷ್ಟು ಲಂಚ ಸ್ವೀಕರಿಸಲಿ ಅಂತ ಜೈಕಾರ ಹಾಕುತ್ತಿರಬೇಕು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಕುಮಾರಸ್ವಾಮಿ ನಾನು ಸರ್ಕಾರ ಬಿಳಿಸಿದೆ ಅಂತಾನೆ. ನಾನು ಸರ್ಕಾರ ಬಿಳಿಸೋದಾಗಿದ್ದರೆ ಕುಮಾರಸ್ವಾಮಿಯನ್ನ ಸಿಎಂ ಆಗೋದಕ್ಕೆ ಬಿಡುತ್ತಿರಲಿಲ್ಲ. 80 ಸೀಟು ಗೆದ್ದಿದ್ದೇವೆ ನಾವು ಜೆಡಿಎಸ್‍ಗೆ ಸಪೋರ್ಟ್ ಮಾಡೋಲ್ಲ ಅಂದಿದ್ದರೆ ಕುಮಾರಸ್ವಾಮಿ ಸಿಎಂ ಆಗ್ತಿದ್ರಾ? ನಾನು ಒಪ್ಪದೇ ಕುಳಿತಿದ್ರೆ ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ಆಗ್ತಿತ್ತಾ? ಇವರು ಅಧಿಕಾರ ಕಳೆದುಕೊಂಡಿದ್ದು ನನ್ನಿಂದಲ್ಲ. ಬದಲಿಗೆ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಕುಳಿತು ಅಧಿಕಾರ ಮಾಡುತ್ತಿದ್ದಕ್ಕೆ ಅಧಿಕಾರ ಕಳೆದುಕೊಂಡರು. ಶಾಸಕರು, ಸಚಿವರ ಕೈಗೆ ಸಿಗುತ್ತಿರಲಿಲ್ಲ. ಯಾವ ಪತ್ರ ಕೊಟ್ಟರೂ ಒಂದಕ್ಷರ ಬರೆಯುತ್ತಿರಲಿಲ್ಲ. ಇದರಿಂದ ಬೇಸರಗೊಂಡು ಶಾಸಕರು ಹೊರಗೆ ಹೋದರು. ಇವರು ಶಾಸಕರ ಕೈಗೆ ಸಿಕ್ಕಿದ್ದರೆ 14 ಎಂಎಲ್‍ಎಗಳು ನಮ್ಮಲ್ಲೇ ಇರುತ್ತಿದ್ದರು. ಸರ್ಕಾರವು ಬೀಳುತ್ತಿರಲಿಲ್ಲ. ಕುಣಿಯೋಕೆ ಆಗದವರು ನೆಲಡೊಂಕು ಅಂತಾರೆ. ಕುಮಾರಸ್ವಾಮಿದು ಅದೇ ರೀತಿ. ಸಮ್ಮಿಶ್ರ ಸರ್ಕಾರ ಬೀಳಲು ಕಾರಣ ಕುಮಾರಸ್ವಾಮಿ ಎಂದು ಎಚ್‍ಡಿಕೆ ವಿರುದ್ಧ ಹರಿಹಾಯ್ದರು.

ನನ್ನ ವಿರುದ್ಧ 5 ವರ್ಷ ಯಾವತ್ತೂ ಯಾವ ಎಂಎಲ್‍ಎಗಳು ಧ್ವನಿ ಎತ್ತಿರಲಿಲ್ಲ. ಸಚಿವ ಸ್ಥಾನದಿಂದ ಕೇಳಗಿಸಿದ್ದಕ್ಕೆ ಶ್ರೀನಿವಾಸ್ ಪ್ರಸಾದ್ ಹೋಗಿದ್ದು ಬಿಟ್ಟರೆ ಮತ್ಯಾರು ಮಾತನಾಡಿದ್ದರು ಹೇಳಿ. ಆದರೆ ಒಂದೂವರೆ ವರ್ಷ ಕುಮಾರಸ್ವಾಮಿ ವಿರುದ್ಧ ಎಲ್ಲ ಎಂಎಲ್‍ಎಗಳು ಮಾತನಾಡಿದ್ದರು. ಈಗ ಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಾರೆ ಎಂದರು.

ಗೋ ಹತ್ಯೆ ನಿಷೇಧ ಕಾಯ್ದೆ ವಿರೋಧಿಸಿಕ್ಕೆ ಮುಸ್ಲಿಂ ಒಲೈಕೆ ಮಾಡ್ತಿದ್ದಾನೆ ಎಂದು ಹೇಳಿದ್ರು. ಗೋ ಮಾಂಸವನ್ನ ಮುಸ್ಲಿಮರು ಮಾತ್ರ ತಿನ್ನುತ್ತಿದ್ದಾರಾ. ಎಲ್ಲರೂ ತಿನ್ನುತ್ತಾರೆ, ಹಿಂದುಳಿದವರು, ದಲಿತರು ಎಲ್ಲರೂ ತಿನ್ನುತ್ತಾರೆ. ಅಹಾರ ಪದ್ಧತಿ ನಮ್ಮ ಇಷ್ಟ. ಬೇಕು ಎಂದರೆ ನಾನು ಗೋಮಾಂಸ ತಿನ್ನುತ್ತೇನೆ. ದನವನ್ನು ಸಾಕುವ ರೈತರಿಗೆ ಅದರ ಕಷ್ಟ ಗೊತ್ತಿದೆ. ಆರ್‍ಎಸ್‍ಎಸ್ ನವರಿಗೇನು ಗೊತ್ತು. ಸಗಣಿ ಎತ್ತಿದ್ದರೆ ಅದರ ಕಷ್ಟ ಗೊತ್ತಿರುತ್ತಿತ್ತು. ರೈತ ಹಸು ಸಾಕುವುದನ್ನು ನಿಲ್ಲಿಸಿದರೆ ಹಾಲನ್ನು ಹೇಗೆ ಉತ್ಪಾದನೆ ಮಾಡುವುದು. ದನವನ್ನು ಸಾಕಲಾಗದವರು ನನ್ನ ಮನೆಗೆ ತಂದು ಕೊಡಿ ಎಂದು ಅಶೋಕ್ ಹೇಳುತ್ತಾನೆ. ದುಡ್ಡು ಕೊಟ್ಟು ತೆಗೆದುಕೊಂಡು ಸಾಕು ಅಂತ ನಾನು ಹೇಳಿದೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಬಿಜೆಪಿಯ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಎನ್ನುವವಳು ಎಪಿಎಂಸಿ ರದ್ದು ಮಾಡೋಕೆ ಇದೆ ಸರಿಯಾದ ಸಮಯ ಅಂದಿದ್ದಾಳೆ. ಅವರು ಎಪಿಎಂಸಿ, ಕೃಷಿ ಕಾಯ್ದೆ ತಿದ್ದುಪಡಿ ಮಾಡಿದ್ದಾರೆ. ಇದರಿಂದ ರೈತರಿಗೆ ಅನಾನೂಕೂಲ ಆಗಿದೆ ಎಂದು ನಿರ್ಮಲಾ ಸೀತಾರಾಮನ್ ವಿರುದ್ಧ ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.

Click to comment

Leave a Reply

Your email address will not be published. Required fields are marked *

www.publictv.in