Wednesday, 11th December 2019

ಎಷ್ಟಿಂಚು ಎದೆಯಿದ್ದರೇನು ಪ್ರಯೋಜನ, ಮಾತೃ ಹೃದಯವಿರಬೇಕು: ಮೋದಿಗೆ ಸಿದ್ದು ಟಾಂಗ್

– ರಮೇಶ್ ಸಾವು ನಿಗೂಢವಾಗಿ ಕಾಣಿಸ್ತಿದೆ
– ವಿಧಾನಸಭೆಯಲ್ಲಿ ಮಾಧ್ಯಮ ನಿಷೇಧಕ್ಕೆ ಕಿಡಿ

ಚಿಕ್ಕಮಗಳೂರು: ಕರ್ನಾಟಕ ಪ್ರವಾಹಕ್ಕೆ ಸರಿಯಾಗಿ ಸ್ಪಂದಿಸದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಎಷ್ಟಿಂಚು ಎದೆಯಿದ್ದರೇನು ಪ್ರಯೋಜನ, ಮಾತೃ ಹೃದಯವಿರಬೇಕು. ಜನರ ಕಷ್ಟಕ್ಕೆ ಸ್ಪಂದಿಸುವ ಮನಸ್ಸಿರಬೇಕು ಎಂದು ಮೋದಿಗೆ ಟಾಂಗ್ ಕೊಟ್ಟಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ, ಈ ವರ್ಷ ರಾಜ್ಯದಲ್ಲಿ ಪ್ರವಾಹ ಹಾಗೂ ಬರ ಎರಡೂ ಇದೆ. ಇದನ್ನು ಸಚಿವ ಆರ್. ಅಶೋಕ್ ಅವರೇ ಒಪ್ಪಿಕೊಂಡಿದ್ದಾರೆ. ಪ್ರವಾಹದ ಪರಿಹಾರ ಎಷ್ಟು ದಿನಕ್ಕೆ ಬಂದಿದೆ ಎಂದು ಗೊತ್ತಾ? 60 ದಿನಗಳಾದ ಮೇಲೆ 1,200 ಕೋಟಿ ರೂ. ಕೇಂದ್ರ ಸರ್ಕಾರದಿಂದ ಕೊಟ್ಟಿದ್ದಾರೆ. ಧೂಪ ಹಾಕ್ತಾರಲ್ಲ ಆ ರೀತಿ 1,200 ಕೋಟಿ ಕೊಟ್ಟಿದ್ದಾರೆ. ನೆರೆ ಬಂದು ಜನರು ಸಂಕಷ್ಟಕ್ಕೆ ಸಿಲುಕಿ ಸಾಕಷ್ಟು ಸಾವು-ನೋವುಗಳು ಆದರೂ ಮೋದಿ ಕರ್ನಾಟಕಕ್ಕೆ ಬಂದೇ ಇಲ್ಲ. ಸುಮಾರು 2 ಕೋಟಿ ಜನರು ಕರ್ನಾಟಕದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಮೋದಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಬಿಹಾರದಲ್ಲಿ ನೆರೆ ಬಂದಾಗ ತಕ್ಷಣ ಟ್ವೀಟ್ ಮಾಡುತ್ತಾರೆ ಎಂದು ಹರಿಹಾಯ್ದರು.

ಎದೆ ಎಷ್ಟು ಇಂಚು ಇದ್ದರೇನು, ಜನರ ಕಷ್ಟಕ್ಕೆ ಸ್ಪಂದಿಸಲು ಮಾತೃ ಹೃದಯ ಇರಬೇಕು. ನೂರು ಇಂಚು ಎದೆ ಬೇಕಾದರೆ ಇಟ್ಟುಕೊಳ್ಳಿ ಆದರೆ ಮಾತೃ ಹೃದಯ ಇರಬೇಕು ಅಷ್ಟೆ ಎಂದು ಮೋದಿಯರನ್ನು ಟೀಕಿಸಿದರು.

ಇದೇ ವೇಳೆ ವಿಧಾನಸಭೆಯಲ್ಲಿ ಮಾಧ್ಯಮ ನಿಷೇಧ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರನ್ನ ದೂರ ಇಟ್ಟು ಏನು ಮಾಡೋಕೆ ಆಗಲ್ಲ. ವಿಧಾನಸಭೆಯಲ್ಲಿ ನಡೆಯುವ ಕಲಾಪ ಎಲ್ಲರಿಗೂ ಗೊತ್ತಾಗಬೇಕು. ಕಲಾಪ ಗೌಪ್ಯವಾಗಿ ನಡೆಯೋದಿಲ್ಲ, ಎಲ್ಲರಿಗೂ ಗೊತ್ತಾಗಲಿ ಎಂದು ನಾವು ಚರ್ಚೆ ಮಾಡೋದು. ಆದ್ದರಿಂದ ಮಾಧ್ಯಮಕ್ಕೆ ನಿರ್ಬಂಧ ಹೇರಿರುವುದು ಸರಿಯಲ್ಲ. ಈ ನಿರ್ಧಾರ ಸಿಎಂ ಹಾಗೂ ಸ್ಪೀಕರ್ ಇಬ್ಬರೂ ಸೇರಿಯೇ ಮಾಡಿರುವುದು. ಸರ್ಕಾರಕ್ಕೆ ಗೊತ್ತಿಲ್ಲದೆ ಏನು ಮಾಡೋಕೆ ಆಗಲ್ಲ. ಬಿಜೆಪಿಯವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಅಲ್ಲದೆ ಬಿಜೆಪಿ ಸರ್ಕಾರ ಸರ್ವಾಧಿಕಾರ ಧೋರಣೆ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ, ಪ್ರಜಾಪ್ರಭುತ್ವದ ಕೊಲೆ ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ನಾಲ್ಕು ಅಂಗಗಳು ಮುಖ್ಯ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗ ಮುಖ್ಯ ಪಾತ್ರವಹಿಸುತ್ತದೆ. ಪ್ರತಿ ನಿಯಮಾವಳಿಗಳನ್ನ ನಾವೇ ಮಾಡಿಕೊಂಡಿರೋದು. ನಿಯಮಾವಳಿಗಳು ದೇವಲೋಕದಿಂದ ಇಳಿದು ಬಂದಿಲ್ಲ. ನಿಯಮಗಳ ಬಗ್ಗೆ ಬಿಜೆಪಿಯವರಿಗೇ ನಂಬಿಕೆ ಇಲ್ಲ. ಸರ್ಕಾರದ ಹುಳುಕು, ವೈಫಲ್ಯಗಳು ಗೊತ್ತಾಗುತ್ತದೆ ಎಂದು ಮಾಧ್ಯಮದವರನ್ನ ದೂರ ಇಟ್ಟಿದ್ದಾರೆ ಎಂದು ಆರೋಪಿಸಿದರು.

ವಿರೋಧ ಪಕ್ಷದ ನಾಯಕರು ಮಾತಾನಾಡುವಾಗ ತಡೆಯೋದು ಸರಿಯಲ್ಲ. ನಾನು ಯಾವತ್ತೂ ಈ ರೀತಿಯ ಸ್ಪೀಕರ್ ನೋಡಿಲ್ಲ. ಮುಂದೆ ಇದೇ ರೀತಿ ನಡೆದರೆ ವಿಧಾನಸಭೆ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಜೊತೆಗೆ ಈ ಸಲ ಒಪ್ಪಿಕೊಂಡಿದ್ದೇನೆ. ಆದರೆ ಮೋದಿ, ಅಮಿತ್ ಶಾ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಆರ್‍ಎಸ್‍ಎಸ್ ಅವರಿಗೆ ನಂಬಿಕೆ ಬರೋಕೆ ಸಾಧ್ಯವಿಲ್ಲ ಎಂದು ಗುಡುಗಿದರು.

ಹಾಗೆಯೆ ಪರಮೇಶ್ವರ್ ಪಿ.ಎ. ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿ, ರಮೇಶ್ ಸಾವು ನಿಗೂಢವಾಗಿ ಕಾಣಿಸುತ್ತದೆ. ಡೆತ್ ನೋಟ್‍ನಲ್ಲಿ ನನಗೆ ಕಿರುಕುಳ ಕೊಟ್ಟಿದ್ದಾರೆಂದು ಉಲ್ಲೇಖಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಪ್ರಕರಣದ ಸೂಕ್ತ ತನಿಖೆಯಾಗಬೇಕು. ಈ ಸಂಬಂಧ ಯಾವ ಏಜೆನ್ಸಿ ತನಿಖೆ ಮಾಡಬೇಕು ಅನ್ನೋದು ಸರ್ಕಾರಕ್ಕೆ ಬಿಟ್ಟಿದ್ದು. ರಮೇಶ್ ಸಾವಿಗೆ ಕಾರಣರಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *