Wednesday, 29th January 2020

Recent News

ಸುಪ್ರೀಂ ಆದೇಶದಲ್ಲಿ ಗೊಂದಲವಿದೆ – ವಿಶ್ವಾಸಮತ ಮುಂದೂಡಿಕೆಗೆ ಸಿದ್ದರಾಮಯ್ಯ ಮನವಿ

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗದ ನಾಯಕ ಸಿದ್ದರಾಮಯ್ಯನವರು ವಿಶ್ವಾಸಮತ ಮುಂದೂಡಿಕೆ ಮಾಡುವಂತೆ ಸ್ಪೀಕರ್ ಬಳಿ ಮನವಿ ಮಾಡಿಕೊಂಡಿದ್ದಾರೆ.

ಸದನದಲ್ಲಿ ಮಾತನಾಡಿದ ಸಿದ್ದರಾಮಯ್ಯನವರು, ನಾವು ಸುಪ್ರೀಂಕೋರ್ಟ್ ಆದೇಶ ಪ್ರಶ್ನೆ ಮಾಡುತ್ತಿಲ್ಲ. 15 ಶಾಸಕರು ಸುಪ್ರೀಂಕೋರ್ಟ್ ಆದೇಶದಿಂದ ಪ್ರಭಾವಿತರಾಗಿದ್ದು, ಅವರೆಲ್ಲ ವಿಪ್ ಉಲ್ಲಂಘನೆ ಮಾಡಿದ್ದಾರೆ. ಶೆಡ್ಯೂಲ್ 10 ಪ್ರಕಾರ ವಿಪ್ ನೀಡುವುದು ನನ್ನ ಅಧಿಕಾರ. ಈ ಶೆಡ್ಯೂಲ್ ಜಾರಿಯಲ್ಲಿರುವಾಗ ಸುಪ್ರೀಂಕೋರ್ಟ್ ಆದೇಶ ಬಂದಿದೆ. ಹಾಗಾಗಿ ಮೊದಲು ವಿಪ್ ಇತ್ಯರ್ಥವಾಗಲಿ ನಂತರ ವಿಶ್ವಾಸಮತ ಮುಂದೂಡಿ ಎಂದು ಮನವಿ ಸಲ್ಲಿಸಿದರು.

ಇತ್ತ ಟ್ವಿಟ್ಟರ್ ನಲ್ಲಿಯೂ ಸಿದ್ದರಾಮಯ್ಯನವರು ಸಾಲು ಸಾಲು ಟ್ವೀಟ್ ಮಾಡುವ ಮೂಲಕ ಅನರ್ಹ ಶಾಸಕರ ವಿಪ್ ಇತ್ಯರ್ಥವಾಗಬೇಕೆಂದಿದ್ದಾರೆ. ರಾಜ್ಯದ 15 ಶಾಸಕರ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ಮಧ್ಯಂತರ ಆದೇಶದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕನಾಗಿ ನಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡುವ ನನ್ನ ಹಕ್ಕನ್ನು ಹತ್ತಿಕ್ಕಿದಂತೆ ಕಾಣುತ್ತಿದೆ. ಈ ಬಗ್ಗೆ ಸಭಾಧ್ಯಕ್ಷರು ಸ್ಪಷ್ಟೀಕರಣ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

ಸುಪ್ರೀಂಕೋರ್ಟ್ ನೀಡಿದ್ದ ಮಧ್ಯಂತರ ಆದೇಶದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾದ ನನ್ನ ಅಧಿಕಾರದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪವಾಗಿದೆ. ಆ ಪ್ರಕರಣದಲ್ಲಿ ನಾನು ಪ್ರತಿವಾದಿ ಆಗದೇ ಇರುವ ಕಾರಣ ನನ್ನ ಅಭಿಪ್ರಾಯ ಮಂಡಿಸಲು ಸಾಧ್ಯವಾಗಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆಯ ಮೂಲ ಆಶಯ ಈಡೇರಬೇಕಾದರೆ, ಶಾಸಕಾಂಗ ಪಕ್ಷದ ನಾಯಕರಿಗೆ ತಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡಲು ಅವಕಾಶ ಇರಲೇಬೇಕು. ವಿಪ್ ನೀಡಿಕೆಯ ಹಕ್ಕು ಸೇರಿದಂತೆ ಶಾಸಕಾಂಗ ಪಕ್ಷದ ನಾಯಕನ ಅಧಿಕಾರಕ್ಕೆ ರಕ್ಷಣೆ ನೀಡಿದ ಸಭಾಧ್ಯಕ್ಷರ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ ಮತ್ತು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಶಾಸಕಾಂಗದ ಪಕ್ಷದ ನಾಯಕನಾಗಿ ನಮ್ಮ ಸದಸ್ಯರಿಗೆ ವಿಪ್ ನೀಡುವ ನನ್ನ ಅಧಿಕಾರದ ಬಗ್ಗೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಲ್ಲಿ ಗೊಂದಲ ಇದೆ. ಇದು ಸ್ಪಷ್ಟವಾಗುವ ವರೆಗೆ ಮುಖ್ಯಮಂತ್ರಿಗಳು ವಿಶ್ವಾಸಮತ ಮಂಡನೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *