Tuesday, 23rd July 2019

Recent News

ದಳ ವಿರುದ್ಧ ಕೈ ಕಾರ್ಯಕರ್ತರು ಗರಂ ಆಗಿದ್ದು ಯಾಕೆ? ಸರ್ಕಾರದ ಸಾಧನೆ ತಿಳಿಸಿ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ನನ್ನನ್ನು ಅಭಿಮಾನದಿಂದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ನಮ್ಮ ಸಿಎಂ ಸಿದ್ದರಾಮಯ್ಯ ಎನ್ನುತ್ತಾರೆ. ಅಭಿಮಾನ ತೋರುವವರ ಬಾಯಿ ಮುಚ್ಚಿಸಲಾಗುತ್ತದೆಯೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಅಭಿಮಾನದಿಂದ ನನ್ನನ್ನು ಸಿಎಂ ಎನ್ನುವ ಮಂದಿಯ ಬಾಯಿ ಮುಚ್ಚಿಸಲು ಆಗುವುದಿಲ್ಲ. ಸದ್ಯ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಸ್ಥಾನದಲ್ಲಿ ಎಚ್.ಡಿ ಕುಮಾರಸ್ವಾಮಿ ಅವರು ಇದ್ದಾರೆ. ಹೀಗಾಗಿ ಈ ವೇಳೆ ಯಾರು ಸಿಎಂ ಆಗಬೇಕು ಅನ್ನುವ ಚರ್ಚೆ ಸರಿಯಲ್ಲ. ಅಭಿಮಾನಿಗಳು ಸಭೆ, ಸಮಾರಂಭಗಳಲ್ಲಿ ನೀವೇ ಸಿಎಂ ಎನ್ನುತ್ತಾರೆ. ಆಗ ನಾನು ಅಭಿಮಾನಿಗಳ ಮಾತಿಗೆ ಪ್ರತಿಕ್ರಿಯಿಸಿ ಮತ್ತೆ ನೀವು ಬಹುಮತ ನೀಡಿದರೆ ನಾನು ಸಿಎಂ ಆಗುವೆ ಎಂದು ಹೇಳಿದ್ದೆ ಎಂದು ತಮ್ಮ ಹೇಳಿಕೆಯನ್ನು ಟ್ವೀಟ್ ಮೂಲಕ ಸಮರ್ಥಿಸಿಕೊಂಡಿದ್ದಾರೆ.

ಹಾಗೆಯೇ ಜೆಡಿಎಸ್ ನಾಯಕ ಹಾಗೂ ಸಚಿವ ಜಿ.ಟಿ ದೇವೇಗೌಡರ ಹೇಳಿಕೆಗೂ ಟ್ವೀಟ್ ಮೂಲಕವೇ ಪ್ರತಿಕ್ರಿಯಿಸಿ, ಮೈತ್ರಿ ಸರ್ಕಾರದಲ್ಲಿ ಇಂತಹ ಹೇಳಿಕೆಗಳು ಒಳ್ಳೆಯದಲ್ಲ. ಸಚಿವರ ಹೇಳಿಕೆಯಿಂದ ಸಿಟ್ಟಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ಅವರು ಬರೆದುಕೊಂಡಿದ್ದಾರೆ.

ಟ್ವೀಟ್‍ಗಳಲ್ಲಿ ಏನಿದೆ?
ಸರಣಿ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ಸಿದ್ದರಾಮಯ್ಯ ಹೊರಹಾಕಿದ್ದಾರೆ. ಸಮ್ಮಿಶ್ರ ಸರ್ಕಾರ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಹೇಳಿಕೆಗಳು ಸೇರಿದಂತೆ ಬಿಜೆಪಿ ಅವರ ವಾಗ್ದಾಳಿಗಳ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರು ಇದ್ದಾರೆ. ಈಗ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಅಪ್ರಸ್ತುತ. ಸಭೆ ಸಮಾರಂಭಗಳಲ್ಲಿ ಜನರು ನೀವೇ ನಮ್ಮ ಮುಂದಿನ ಮುಖ್ಯಮಂತ್ರಿ ಎಂದು ಕೂಗುತ್ತಾರೆ, ಆಗ ಮತ್ತೆ ತಾವೆಲ್ಲ ನಮ್ಮ ಪಕ್ಷಕ್ಕೆ ಬಹುಮತ ನೀಡಿದರೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಅವರಿಗೆ ಹೇಳಿದ್ದೇನೆ. ಅಭಿಮಾನದಿಂದ ನೀವು ಮುಖ್ಯಮಂತ್ರಿಯಾಗಿ ಎಂದು ಹೇಳುವವರ ಬಾಯಿ ಮುಚ್ಚಿಸಲಾಗುತ್ತದೆಯೇ?

ಬಳಿಕ ರಾಜ್ಯದಲ್ಲಿ ಬಿಜೆಪಿಗೆ 104 ಸೀಟು ಬಂದಾಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿ, ಆ ನಂತರ ಮೂರೇ ದಿನಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಷ್ಟಾದರೂ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹಲವು ಬಾರಿ ಹೇಳಿದ್ದಾರೆ. ಈಗೀಗ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತೇನೆ ಎಂದ ತಕ್ಷಣ ಜನ ನಗಲು ಆರಂಭ ಮಾಡಿದ್ದಾರೆ.

ಹಾಗೆಯೇ ನನ್ನ ಯಾವ ಕಾರ್ಯಕ್ರಮವೂ ಹೆಸರುವಾಸಿಯೇ ಹೊರತು ತಾತ್ಕಾಲಿಕ ಅಲ್ಲ. ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯ ಇವುಗಳನ್ನು ಯಾವುದೇ ಸರ್ಕಾರ ನಿಲ್ಲಿಸಲಿ ನೋಡೋಣ. ಜಾಗೃತ ಮತದಾರರು ಇರುವವರೆಗೆ ಇವೆಲ್ಲಾ ಶಾಶ್ವತ ಕಾರ್ಯಕ್ರಮಗಳು. ಟೀಕಾಕಾರರಿಗೆ ನೆನಪಿರಲಿ.

ಗೆಳೆಯ ಜಿ.ಟಿ.ದೇವೇಗೌಡರು ಇತ್ತೀಚೆಗೆ ನನ್ನ ವಿರುದ್ಧ ಮಾತನಾಡಿಲ್ಲ ನಿಜ. ಆದರೆ ಮೈಸೂರಲ್ಲಿ ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆಂಬ ಅವರ ಹೇಳಿಕೆ ಸತ್ಯವಾಗಿದ್ದರೂ ಅನಗತ್ಯವಾಗಿತ್ತು. ಇದರಿಂದಾಗಿ ಕೆರಳಿದ ನಮ್ಮ ಕಾರ್ಯಕರ್ತರು ಜೆಡಿಎಸ್ ವಿರುದ್ಧ ಮಾತನಾಡತೊಡಗಿದ್ದರು. ಮೈತ್ರಿಕೂಟದಲ್ಲಿ ಇಂತಹದನ್ನು ಮಾಡಬಾರದು.

Leave a Reply

Your email address will not be published. Required fields are marked *