Connect with us

Bengaluru City

ಜಮೀರ್, ರಾಗಿಣಿ ಯಾರೇ ಆಗಲಿ-ಡ್ರಗ್ಸ್ ಮಾಫಿಯಾ ಕುರಿತು ತನಿಖೆ ಮಾಡಲಿ: ಸಿದ್ದರಾಮಯ್ಯ

Published

on

-ಆರ್ಥಿಕತೆ, ಆರೋಗ್ಯ ಹಾಳಾಗಲು ಮೋದಿಯೇ ಕಾರಣ
-ಅವನ್ಯಾರೋ ಸಿಎಂ ಮಗ ಹಿಂದಿನ ಸರ್ಕಾರವೇ ಕಾರಣ ಅಂತಾನೇ

ಬೆಂಗಳೂರು: ಸೆಪ್ಟಂಬರ್ 21 ರಿಂದ ಅಧಿವೇಶನ ಆರಂಭವಾಗಲಿದ್ದು, ಮೊದಲ ದಿನವೇ ಡ್ರಗ್ಸ್ ಮಾಫಿಯದ ವಿರುದ್ಧ ಧ್ವನಿ ಎತ್ತೋಣ. ಡ್ರಗ್ಸ್ ಮಾಫಿಯದ ಬಗ್ಗೆಯೇ ಮೊದಲ ದಿನ ಸದನದಲ್ಲಿ ಚರ್ಚೆ ಮಾಡೋಣ. ಆನಂತರ ಬೇರೆ ವಿಷಯ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಶಾಸಕರಿಗೆ ಸೂಚನೆ ನೀಡಿದ್ದಾರೆ.

ಇಂದು ಪಕ್ಷದ ಎಂಎಲ್‍ಎ, ಎಂಎಲ್‍ಸಿಗಳ ಜೊತೆಗೆ ಸಿದ್ದರಾಮಯ್ಯ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಸಿದ್ಧತೆ ಬಗ್ಗೆ ಚರ್ಚೆ ನಡೆಸಿದರು. ಶಾಸಕರು, ಪರಿಷತ್ ಸದಸ್ಯರುಗಳ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಸೆ.19 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ. ಅಲ್ಲಿ ಎಲ್ಲಾ ವಿಷಯ ಚರ್ಚೆ ಮಾಡುತ್ತೇವೆ. ಈ ಬಾರಿ ಸದನದಲ್ಲಿ ಡ್ರಗ್ಸ್ ಬಗ್ಗೆ ಚರ್ಚೆ ಮಾಡುತ್ತೇವೆ. ಅಷ್ಟೇ ಅಲ್ಲದೇ ಕೊರೊನಾ ಹಗರಣ, ಡಿ.ಜೆ.ಹಳ್ಳಿ ಗಲಭೆ ಪ್ರಕರಣದ ಬಗ್ಗೆಯು ಸದನದಲ್ಲಿ ಚರ್ಚೆ ಮಾಡುತ್ತೇವೆ ಎಂದರು.

ಇದೇ ವೇಳೆ ಸಚಿವ ಜಮೀರ್ ಅಹ್ಮದ್ ಅವರ ವಿರುದ್ಧ ಕೇಳಿ ಬಂದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಯಾರ ಮೇಲೆ ಸಾಕ್ಷಿ ಇದೇ ಅವರ ವಿರುದ್ಧ ತನಿಖೆ ಮಾಡಲಿ. ಜಮೀರ್, ರಾಗಿಣಿ ಯಾರಾದರು ಆಗಲಿ ತನಿಖೆ ಆಗಲಿ. ರಾಗಿಣಿಗೂ ನಮಗೂ ಸಂಬಂಧ ಇಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಆದರೆ ಅವರ ಬೈ ಎಲೆಕ್ಷನ್ ಗಳಲ್ಲಿ ಸ್ಟಾರ್ ಕ್ಯಾಂಪೈನರ್ ಆಗಿ ಪ್ರಚಾರ ಮಾಡಿದ ಫೋಟೋಗಳಿವೆ ಎಂದರು.

ಪ್ರಕರಣದಲ್ಲಿ ಆರೋಪಿಗಳನ್ನು ಬಿಡಿಸಲು ಸಚಿವರು ಪ್ರಭಾವ ಬೀರಿದ್ದ ವಿಚಾರವಾಗಿ ಮಾತನಾಡಿ, ಯಾರಾದರೂ ಆ ರೀತಿ ಮಾಡಿದರೆ ತಪ್ಪು. ಈ ಬಗ್ಗೆ ಮಾಹಿತಿ ಕಲೆಹಾಕುತ್ತೇವೆ. ಡ್ರಗ್ಸ್ ವಿರುದ್ಧ ಸರ್ಕಾರ ಬಲಿಷ್ಠ ಕಾಯ್ದೆ ತರಲಿ ನೋಡೋಣ. ನಾವು ಅದನ್ನು ಸಪೋರ್ಟ್ ಮಾಡುತ್ತೇವೆ. ಜಮೀರ್ ವಿರುದ್ಧ ಆರೋಪ ಮಾಡೋದಲ್ಲ. ಸುಮ್ನೆ ಆರೋಪ ಮಾಡಬಾರದು. ಸಾಕ್ಷಿ ಇದ್ದರೆ ಆರೋಪ ಮಾಡಲಿ, ಸುಮ್ನೆ ರಾಜಕೀಯಕ್ಕಾಗಿ ಯಾವನೋ ಆರೋಪ ಮಾಡಬಾರದು ಎಂದರು.

ಆರ್ಥಿಕತೆಯ ಪ್ರಗತಿಯ ಕುರಿತು ಮಾತನಾಡಿದ ಅವರು, ರಾಜ್ಯ ಕೈಗಾರಿಕೆಯಲ್ಲಿ 17ನೇ ಸ್ಥಾನಕ್ಕೆ ಹೋಗಿದೆ. ಅವನ್ಯಾರೋ ಸಿಎಂ ಮಗ ವಿಜಯೇಂದ್ರ ಹಿಂದಿನ ಸರ್ಕಾರ ಇದಕ್ಕೆ ಕಾರಣ ಎಂದು ಹೇಳುತ್ತಾನೆ. ನೀವು ಒಂದುವರೆ ವರ್ಷದಿಂದ ಇದ್ದೀರಾ, ಏನು ಕಡಿದು ಕಟ್ಟಹಾಕಿದ್ದಾರೆ. ನಾವು ಬರುವ ಮೊದಲು ರಾಜ್ಯ ಕೈಗಾರಿಕೆಯಲ್ಲಿ 13 ನೇ ಸ್ಥಾನದಲ್ಲಿತ್ತು. ನಮ್ಮ ಆಡಳಿತದಲ್ಲಿ 8ನೇ ಸ್ಥಾನದಲ್ಲಿತ್ತು. ಈಗ 17ನೇ ಸ್ಥಾನದಲ್ಲಿದೆ. ಇದಕ್ಕೆ ನಾವು ಕಾರಣನಾ? ಸುಮ್ಮನೆ ಜನರ ದಿಕ್ಕು ತಪ್ಪಿಸಬಾರದು ಎಂದು ತಿರುಗೇಟು ನೀಡಿದರು.

ದೇಶದಲ್ಲಿ ಆರ್ಥಿಕತೆ ಕುಸಿತದಿಂದ 15 ಕೋಟಿ ರೂ. ಕೆಲಸ ನಷ್ಟ ಆಗಿದೆ. ದೆಹಲಿ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೆ ಸ್ವರ್ಗ ಸೃಷ್ಠಿ ಮಾಡುತ್ತೇವೆ ಎಂದರು. ಕೇಂದ್ರದಿಂದ ಗ್ಯಾಸ್ ಸಬ್ಸಿಡಿ ರದ್ದು ಮಾಡಿದೆ. ಎಲ್ಲದಕ್ಕೂ ಕೋವಿಡ್ ಕಾರಣ ಎನ್ನುತ್ತಾರೆ. ಆದರೆ ಇದನ್ನು ಜಾಗತಿಕ ಬ್ಯಾಂಕ್‍ನಿಂದ ಸಾಲ ತಂದಾದ್ರು ಸರಿದೂಗಿಸಬೇಕಿದೆ. ವಿತ್ತ ಸಚಿವೆ ನಿರ್ಮಾಲ ಎಲ್ಲದಕ್ಕೂ ಆಕ್ಟ್ ಆಫ್ ಗಾಡ್ ಅಂತಾರೆ. ತಮ್ಮ ತಪ್ಪು ಮುಚ್ಚಿಹಾಕಿಕೊಳ್ಳಲು ಹೀಗೆ ಹೇಳುತ್ತಾರೆ. ಇವತ್ತು ಆರ್ಥಿಕತೆ ಮತ್ತು ಆರೋಗ್ಯ ಹಾಳಾಗಲು ನರೇಂದ್ರ ಮೋದಿ ಸರ್ಕಾರ ಕಾರಣ.

ಬಿಜೆಪಿ ನಾಯಕರ ಮೇಲಿನ ಕೇಸ್ ಕೈಬಿಟ್ಟಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಪ್ರಕರಣ ಕೈಬಿಟ್ಟಿರುವುದು ಅಧಿಕೃತವಾದರೆ ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದರು.

Click to comment

Leave a Reply

Your email address will not be published. Required fields are marked *