Connect with us

Bengaluru Rural

ಎಂಟಿಬಿ ನಾಗರಾಜ್ ರಾಜಕೀಯದಲ್ಲಿ ಇರಲಿಕ್ಕೆ ಯೋಗ್ಯರೇ: ಸಿದ್ದರಾಮಯ್ಯ

Published

on

– ಶಿಷ್ಯನ ವಿರುದ್ಧವೇ ಗುಡುಗಿದ ಮಾಜಿ ಸಿಎಂ
– ನಾಗರಾಜ ಅಂದ್ರೆ ಹಾವಾ? ಮೊನ್ನೆ ಡ್ಯಾನ್ಸ್ ಮಾಡಿದಾ
– ಅವನು ವಿಷ ಅಂತ ನಿಮಗೂ ಗೊತ್ತಾಗಲಿಲ್ವಾ?

ಬೆಂಗಳೂರು: ಅನರ್ಹ ಶಾಸಕ ಎಂಬಿಟಿ ನಾಗರಾಜ್ ರಾಜಕೀಯದಲ್ಲಿ ಇರುವುದಕ್ಕೆ ಯೋಗ್ಯರೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಹೊಸಕೋಟೆ ಮತದಾರರನ್ನು ಪ್ರಶ್ನಿಸಿದ್ದಾರೆ.

ಹೊಸಕೋಟೆಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರನ್ನ ಎದೆಯಲ್ಲಿ ಇಟ್ಟುಕೊಂಡಿದ್ದೇನೆ ಎಂದು ಎಂಟಿಬಿ ನಾಗರಾಜ್ ಹೇಳಿಕೊಂಡಿದ್ದ. ಆದರೆ ಈಗ ನನ್ನನ್ನು ಎದೆಯಿಂದ ಕಿತ್ತು ಸೈಡಿಗೆ ಇಟ್ಟಿದ್ದೇನೆ ಅಂತ ಹೇಳಿಕೆ ನೀಡಿದ್ದಾನೆ. ಇಂತವನು ರಾಜಕೀಯದಲ್ಲಿ ಇರುವುದಕ್ಕೆ ಲಾಯಕ್ ಇದಾನಾ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಹೊಸಕೋಟೆ ಮತಕ್ಷೇತ್ರದ ಜನರು ಮೂರು ಬಾರಿ ಎಂಟಿಬಿ ನಾಗರಾಜ್ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದೀರಿ. ಆದರೆ ಈ ಬಾರಿ ನಿಮ್ಮನ್ನು ಒಂದು ಮಾತು ಕೇಳದೆ ರಾಜೀನಾಮೆ ನೀಡಿದರು. ಅದಾದ ಬಳಿಕ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ರಾಜೀನಾಮೆ ಸಲ್ಲಿಸಿದ್ದ ಶಾಸಕರನ್ನು ಯಾಕೆ ಅನರ್ಹಗೊಳಿಸಿದರು ಎನ್ನುವುದನ್ನು ನಿಮಗೆ ತಿಳಿದಿದೆ. ರಮೇಶ್ ಕುಮಾರ್ ಅವರು ಎಲ್ಲರಿಗೂ ಅರ್ಥವಾಗುವಂತೆ ಶಾಸಕರ ಅನರ್ಹತೆಗೆ ಸ್ಪಷ್ಟ ಕಾರಣಗಳನ್ನು ನೀಡಿದ್ದಾರೆ ಎಂದರು.

ರಾಜೀನಾಮೆ ಪರ್ವ ಆರಂಭವಾಗುತ್ತಿದ್ದಂತೆ ಎಂಟಿಬಿ ನಾಗರಾಜ್ ಅವರನ್ನು ಮಾಜಿ ಡಿಸಿಎಂ ಪರಮೇಶ್ವರ್ ನಿವಾಸಕ್ಕೆ ಕರೆಸಿಕೊಂಡಿದ್ದೇವು. ಆಗ ಏನಪ್ಪ ನೀನು ಬಿಜೆಪಿಗೆ ಹೋಗುತ್ತಿಯಂತೆ? ಏನ್ ಸಮಾಚಾರ ಅಂತ ವಿಚಾರಿಸಿದೆ. ಅದನ್ನು ಅಲ್ಲಗಳೆದಿದ್ದ ಎಂಟಿಬಿ ನಾಗರಾಜ್, ಅಯ್ಯಯ್ಯೋ ನಾನ ಸರ್? ಇಲ್ಲ ದೇವರ ಆಣೆ ನಿಮ್ಮನ್ನ ಹಾಗೂ ಕಾಂಗ್ರೆಸ್ಸನ್ನು ಬಿಟ್ಟು ಹೋಗಲ್ಲ ಅಂತ ಹೇಳಿಬಿಟ್ಟ. ನಾನು ನಂಬಿದೆ. ಯಾಕಂದ್ರೆ ಎದೆಬಗೆದರೆ ನಾನೇ ಇದೇನಿ ಅಂತ ಹೇಳಿದ್ದ. ಹೀಗಾಗಿ ಕಾಂಗ್ರೆಸ್ ರಾಜೀನಾಮೆ ಕೊಡಲ್ಲ ಎನ್ನುವ ಭರವಸೆ ಇತ್ತು ಎಂದು ವ್ಯಂಗ್ಯವಾಡಿದರು.

ಆಣೆ ಪ್ರಮಾಣ ಮಾಡಿ ಎಂಡಿಬಿ ನಾಗರಾಜ್ ಚಿಕ್ಕಬಳ್ಳಾಪುರ ಡಾ.ಕೆ.ಸುಧಾಕರ್ ಜೊತೆ ಸೇರಿ ರಾಜೀನಾಮೆ ಕೊಟ್ಟರು. ತಕ್ಷಣವೇ ಅವರನ್ನು ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಕೃಷ್ಣಭೈರೇಗೌಡ, ಪರಮೇಶ್ವರ್ ಅವರು ಭೇಟಿಯಾಗಿದ್ದರು. ಮತ್ತೆ ಬೆಳಗ್ಗೆ ಇಬ್ಬರನ್ನು ನಮ್ಮ ಮನೆಗೆ ಕರೆಸಿಕೊಂಡು ರಾತ್ರಿ 10 ಗಂಟೆವರೆಗೂ ಬುದ್ಧಿ ಹೇಳಿದ್ವಿ. ಆದರೆ ಆಸಾಮಿ ಬೆಳಗ್ಗೆ ಮುಂಬೈಗೆ ಹಾರಿಬಿಟ್ಟ ಎಂದು ಕಿಡಿಕಾರಿದರು.

ಹೊಸಕೋಟೆ ಕಾಂಗ್ರೆಸ್ ಭದ್ರಕೋಟೆ. ಈ ಹಿಂದೆ ಎಂಟಿಬಿ ನಾಗರಾಜ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರಿಂದ ಗೆಲುವು ಸಾಧಿಸಿದ್ದರು. ಹೀಗಾಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಯಾರೇ ಸ್ಪರ್ಧೆ ಮಾಡಿದರೂ ಅವರು ಜಯ ಗಳಿಸಬೇಕು. ಈ ಮೂಲಕ ಪ್ರಜಾಪ್ರಭುತ್ವಕ್ಕೆ ಗೆಲುವು ತಂದು ಕೊಡಬೇಕು. ನಿಮಗೆ ಮೋಸ ಮಾಡಿದವರನ್ನು ರಾಜಕೀಯದಲ್ಲಿ ಇರುವುದಕ್ಕೆ ಬಿಡಬಾರದು ಎಂದು ಮತದಾರರಿಗೆ ಕೇಳಿಕೊಂಡರು.

ನಾಗರಾಜ ಅಂದ್ರೆ ನಾಗರ ಹಾವಾ? ಇತ್ತೀಚೆಗೆ ಅವನು ನಾನು ನಾಗರಾಜ ಅಂತ ಹೇಳುತ್ತಿದ್ದಾನೆ. ಅಂದ್ರೆ ಅವನು ವಿಷ ಇರುವ ವ್ಯಕ್ತಿಯೇ? ಅದೆಲ್ಲೋ ಡ್ಯಾನ್ಸ್ ಮಾಡಿದ್ದಾ. ನಿಂಬೆ ಹಣ್ಣು ಬಾಯಿಯಲ್ಲಿ ಇಟ್ಟುಕೊಂಡು ಡ್ಯಾನ್ಸ್ ಮಾಡೋದು, ಹುಲಿ ಕುಣಿತ ಇವನ್ನೆಲ್ಲಾ ಎಲ್ಲಿ ಕಲಿತ್ತಿದ್ದನೋ ಏನೋ. ಅವನು ವಿಷ… ವಿಷ… ಈ ನಾಗರಾಜ ವಿಷ ಅಂತ ನಿಮಗೂ ಗೊತ್ತಾಗಲಿಲ್ವಾ? ನೀವು ಯಾರ ಮಾತಿಗೂ ಒಳಗಾಗದೆ ಪಕ್ಷದಲ್ಲೇ ಉಳಿದುಕೊಂಡಿದ್ದಿರಿ. ನಿಮಗೆ ನಮೋ.. ನಮೋ… ನಮಃ ಎಂದು ಹೊಸಕೋಟೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕೈಮುಗಿದರು.