Tuesday, 12th November 2019

Recent News

ಮೈತ್ರಿ ಧರ್ಮ ಪಾಲಿಸಲು ಇಷ್ಟವಿಲ್ಲದವ್ರು ಪಕ್ಷ ಬಿಟ್ಟು ಹೋಗಲಿ: ಸಿದ್ದರಾಮಯ್ಯ ಖಡಕ್ ವಾರ್ನಿಂಗ್

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮವನ್ನು ಎಲ್ಲಾ ಕಾರ್ಯಕರ್ತರು ಪಾಲಿಸಿ ಅಭ್ಯರ್ಥಿ ಪರ ಕೆಲಸ ಮಾಡಬೇಕು. ಯಾರಿಗೆ ಇಷ್ಟ ಇಲ್ಲವೇ ಅವರು ಪಕ್ಷ ಬಿಟ್ಟು ಹೋಗಲಿ ಎಂದು ಕಾಂಗ್ರೆಸ್ ಬಂಡಾಯ ಮುಖಂಡರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮಂಡ್ಯ ಕಾಂಗ್ರೆಸ್ ಜೆಡಿಎಸ್ ನಡುವೆ ಭಿನ್ನಾಭಿಪ್ರಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಸ್ಪಷ್ಟನೆ ನೀಡಿದರು. ಇವತ್ತು ಚಲುವರಾಯಸ್ವಾಮಿ ಏನು ಹೇಳಿದ್ದಾರೆ ಎಂಬುವುದು ನನಗೆ ಗೊತ್ತಿಲ್ಲ. ಅವರನ್ನು ಕರೆದು ಮಾತನಾಡುತ್ತೇನೆ. ಅಲ್ಲದೇ ನಾಳೆ ಮಂಡ್ಯ ಕಾಂಗ್ರೆಸ್ ಮುಖಂಡರ ಸಭೆಯನ್ನು ಕರೆದಿದ್ದೇನೆ. ಸಭೆಯಲ್ಲಿ ಸಣ್ಣಪುಟ್ಟ ಗೊಂದಲ, ಭಿನ್ನಾಭಿಪ್ರಾಯ ಬಗೆಹರಿಸುತ್ತೇವೆ. ಎಲ್ಲಾ ಕಾರ್ಯಕರ್ತರೂ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಬೇಕು. ಯಾರಿಗೆ ಇಷ್ಟ ಇಲ್ಲವೋ ಅವರು ಪಕ್ಷ ಬಿಟ್ಟು ಹೋಗಲಿ ಎಂದು ಖಡಕ್ ಎಚ್ಚರಿಕೆ ನೀಡಿದರು.

ಮೈಸೂರು, ಮಂಡ್ಯ, ತುಮಕೂರು, ಹಾಸನಗಳಲ್ಲಿ ಮೈತ್ರಿ ಅಭ್ಯರ್ಥಿ ಪರ ದೇವೇಗೌಡರೊಂದಿಗೆ ಜಂಟಿ ಪ್ರಚಾರ ಮಾಡುತ್ತೇವೆ. ಆ ಮೂಲಕ ಎಲ್ಲಾ ಭಿನ್ನಾಭಿಪ್ರಾಯಗಳನ್ನ ಬಗೆಹರಿಸುತ್ತೇವೆ ಎಂದರು. ನಿಖಿಲ್ ಕುಮಾರಸ್ವಾಮಿ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನನ್ನ ಆಶೀರ್ವಾದ ಕೇಳಲು ನಿಖಿಲ್ ಬಂದಿದ್ದರು. ಒಳ್ಳೇದಾಗಲಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.

ಸಿಎಂ ಎಚ್‍ಡಿಕೆಗೆ ಟಾಂಗ್: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಸೋಲಿಸಲು ಚಕ್ರವ್ಯೂಹ ರೂಪಿಸಲಾಗಿದೆ ಎಂಬ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ ಅವರು, ಚಕ್ರವ್ಯೂಹ ನೀವು ನೋಡಿದೀರಾ? ಅದು ಹೇಗಿರುತ್ತೆ ಅಂತ ನನಗೆ ಗೊತ್ತಿಲ್ಲ. ಚಕ್ರವ್ಯೂಹ ಹೇಗಿರುತ್ತೆ ಎಂದು ಯಾರೂ ನೋಡಿಲ್ಲ. ಯಾವು ವ್ಯೂಹವೂ ಇಲ್ಲ ಎಂದರು.

ಜಿಟಿಡಿಯೊಂದಿಗೆ ಮಾತನಾಡಿದ್ದೇನೆ: ಮೈಸೂರು ಲೋಕಸಭಾ ಕ್ಷೇತ್ರದ ವಿಚಾರದಲ್ಲಿ ಯಾವುದೇ ಭಿನ್ನಭಿಪ್ರಾಯವಿಲ್ಲ. ಈಗಾಗಲೇ ಪ್ರಚಾರ ಕಾರ್ಯ ಶುರುವಾಗಿದೆ. ಆದರೆ ಕಾರ್ಯಕರ್ತರಲ್ಲಿ ಸ್ವಲ್ಪ ಗೊಂದಲವಿದೆ ಅಷ್ಟೇ. ಮೊದಲಿಂದಲೂ ಕಾಂಗ್ರೆಸ್, ಜೆಡಿಎಸ್ ಮಧ್ಯೆ ಹೋರಾಟ ನಡೆದಿರುವುದರಿಂದ ಈಗ ಸಣ್ಣ ಮಟ್ಟದ ಭಿನ್ನಾಭಿಪ್ರಾಯಗಳಿವೆ. ಮೈಸೂರಲ್ಲಿ ಶೇ.99 ರಷ್ಟು ಎರಡೂ ಪಕ್ಷಗಳ ಮೈತ್ರಿಗೆ ಮತ ಹಾಕುತ್ತಾರೆ. ಗೊಂದಲಗಳಿಗೆ ಅವಕಾಶ ನೀಡಿಲ್ಲ. ಇವತ್ತು ಸಚಿವ ಜಿಟಿಡಿ ಅವರೊಂದಿಗೆ ಫೋನ್ ಕರೆ ಮಾಡಿ ಮಾತನಾಡಿದ್ದೇನೆ. ನಿನ್ನೆ ಸಭೆಯಲ್ಲಿ ಏನದು ಗಲಾಟೆ ಎಂದು ಕೇಳಿದೆ. ಒಂದಿಬ್ಬರು ಕಾರ್ಯಕರ್ತರು ಮೈತ್ರಿ ಒಪ್ಪಲ್ಲ ಎಂದು ತಿಳಿಸಿದ್ದಾಗಿ ನನಗೆ ಹೇಳಿದರು. ಈ ಬಾರಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

Leave a Reply

Your email address will not be published. Required fields are marked *