Tuesday, 20th August 2019

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ – ಜಯದೇವ ಹೃದ್ರೋಗ ತಜ್ಞರಿಂದ ತಪಾಸಣೆ

ತುಮಕೂರು: ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಮಂಜುನಾಥ್ ನೇತೃತ್ವದ ನುರಿತ ವೈದ್ಯರ ತಂಡ ಸಿದ್ದಗಂಗಾ ಶ್ರೀಗಳ ಆರೋಗ್ಯ ತಪಾಸಣೆ ನಡೆಸಿದೆ. ಒಟ್ಟು ಐದು ಜನ ತಜ್ಞರ ತಂಡ ಸುಮಾರು 1 ಗಂಟೆಗಳ ಕಾಲ ಶ್ರೀಗಳ ತಪಾಸಣೆ ನಡೆಸಿ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ತಿಳಿಸಿದೆ.

ಶ್ರೀಗಳ ಆರೋಗ್ಯ ತಪಾಸಣೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಾ. ಮಂಜುನಾಥ್ ಅವರು, ಶ್ರೀಗಳ ರಕ್ತದೊತ್ತಡ, ಹೃದಯ ಬಡಿತ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದು, ಶ್ವಾಸಕೋಶದ ಸೋಂಕು ಕೂಡಾ ಕಡಿಮೆಯಾಗಿದೆ. ಆದರೆ ಶ್ರೀಗಳಿಗೆ ನಿಶ್ಯಕ್ತಿ ಇದ್ದು, ಬೆನ್ನು ಬಾಗಿರುವುದರಿಂದ ಶ್ವಾಸ ಕೋಶದ ಮೇಲೆ ಪರಿಣಾಮ ಬೀರುತ್ತಿದೆ. ಪರಿಣಾಮ ಉಸಿರಾಟಕ್ಕೆ ತೊಂದರೆಯಾಗುತ್ತಿರುವ ಕಾರಣ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದೆ. ಆದ್ರೂ ಶ್ರೀಗಳು ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದರು.

ಶ್ರೀಗಳು ಕಣ್ಣು ಬಿಟ್ಟು ನೋಡುತ್ತಿದ್ದು, ಸಿದ್ದಗಂಗಾ ಆಸ್ಪತ್ರೆಯಲ್ಲಿ ವಿಶ್ವ ದರ್ಜೆಯ ಐಸಿಯು ವ್ಯವಸ್ಥೆ ಇದೆ. ಇದರಿಂದ ಬೇರೆ ಕಡೆ ಶಿಪ್ಟ್ ಮಾಡುವ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರದ ನಿರ್ದೇಶನದಂತೆ ನಾವು ಐದು ಜನ ವೈದ್ಯರು ಬಂದಿದ್ದೇವೆ. ಶ್ರೀಗಳ ದೇಹದಲ್ಲಿ ಪ್ರೊಟೀನ್ ಅಂಶ ಏರಿಕೆಯಾಗಿರುವುದರಿಂದ ಅವರ ಆರೋಗ್ಯ ಗುಣವಾಗುತ್ತೆ ಎಂಬ ಆಶಾಭಾವನೆ ಇದೆ ಎಂದರು.

ಸಿದ್ದಗಂಗಾ ಶ್ರೀ ಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನ ಆಸ್ಪತ್ರೆಗೆ ಸುತ್ತೂರು ಶ್ರೀ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *