Wednesday, 26th February 2020

ಪೂಜ್ಯ ಗದ್ದುಗೆಯಲ್ಲಿ ಐಕ್ಯರಾದ ಶ್ರೀಗಳು

ತುಮಕೂರು: ವಿಶ್ವಚೇತನ, ವಿಶ್ವರತ್ನ, ಕಾಯಕಯೋಗಿ, ನಡೆದಾಡುವ ದೇವರು ಡಾ. ಶಿವಕುಮಾರಸ್ವಾಮೀಜಿಗಳ ಯುಗಾಂತ್ಯವಾಗಿದೆ. ಸೋಮವಾರ 11 ಗಂಟೆ 44 ನಿಮಿಷಕ್ಕೆ ಲಿಂಗೈಕ್ಯರಾದ ಮಹಾನ್ ಮಾನವತಾವಾದಿಗೆ ಕೋಟಿ ಮನಸುಗಳು ಭಾರ ಹೃದಯದಿಂದ ಬೀಳ್ಕೊಡುಗೆ ನೀಡಿದ್ದಾರೆ. ಸಿದ್ದಗಂಗಾ ಮಠದ ಆವರಣದಲ್ಲಿ ಗುರು ಉದ್ಧಾನ ಶಿವಯೋಗಿಗಳ ಪಕ್ಕದಲ್ಲಿ ಶಿವಕುಮಾರ ಸ್ವಾಮೀಜಿಯವರನ್ನು ಗದ್ದುಗೆಯಲ್ಲಿ ಐಕ್ಯ ಮಾಡಲಾಗಿದೆ.

ಮಧ್ಯಾಹ್ನ 4.30ರ ವೇಳೆಗೆ ಆರಂಭವಾದ ಕ್ರಿಯಾ ವಿಧಾನ, ವಿಧಿ ವಿಧಾನಗಳು ಅಂತಿಮವಾಗಿ 8.30 ಗಂಟೆಗೆ ಪೂರ್ಣಗೊಂಡಿತು. ಶ್ರೀಗಳು ಚೈತನ್ಯ ಅವರ ದೇಹವನ್ನು ಬಿಟ್ಟು ಹೋದ ಬಳಿಕ ಅವರ ದೇಹಕ್ಕೆ ಮತ್ತೆ ಚೈತನ್ಯ ತುಂಬಲು ಕ್ರಿಯಾ ಸಮಾಧಿ ವಿಧಿ ವಿಧಾನ ಮಾಡಲಾಯಿತು. ಲಿಂಗಧಾರಣೆ ಮಾಡಿ, ಇಷ್ಟಲಿಂಗ ಪೂಜೆ ಮಾಡುವ ಅಧ್ಯಾತ್ಮ ಸಾಧಕರಿಗೆ ಮಾತ್ರ ಲಿಂಗಾಯತ ಕ್ರಿಯಾಸಮಾಧಿ ಮಾಡಲಾಗುತ್ತದೆ.

ಸಂಜೆ 4.30ಕ್ಕೆ ಆರಂಭವಾದ ಈ ಪ್ರಕ್ರಿಯೆಯಲ್ಲಿ ಕಿರಿಯ ಶ್ರೀಗಳು ಮುಂದಿದ್ದು ಎಲ್ಲಾ ವಿಧಿ ವಿಧಾನಗಳನ್ನು ನೆರವೇರಿಸಿದರು. 5 ಗಂಟೆಗೆ ಶ್ರೀಗಳು ಮಹಾ ಮಂಗಳಾರತಿ ಮಾಡಿದ ಬಳಿಕ ಮೆರವಣಿಗೆಗೆ ಆರಂಭ ಮಾಡಲಾಯಿತು. 5.15 ಗಂಟೆಗೆ ಸುಮಾರಿಗೆ ಲಿಂಗೈಕ್ಯ ದೇಹವನ್ನು 1 ಲಕ್ಷದ 1 ರುದ್ರಾಕ್ಷಿ ಹಾಗೂ ಹೂಗಳಿಂದ ಅಲಂಕಾರ ಮಾಡಿದ್ದ ವಿಮಾನಗೋಪುರದ ಮೂಲಕ ಅಂತಿಮ ಯಾತ್ರೆ ಮೆರವಣಿಗೆ ಆರಂಭ ಮಾಡಲಾಯಿತು.

ಸಂಜೆ 6 ಗಂಟೆ ವೇಳೆಗೆ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ದಿನೇಶ್ ಗುಂಡೂರಾವ್, ವೀರಪ್ಪ ಮೊಯ್ಲಿ, ದೇಶಪಾಂಡೆ, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಜನಾರ್ದನ ರೆಡ್ಡಿ, ಡಿಸಿಎಂ ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಚಿವ ವಿ.ಸೋಮಣ್ಣ, ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು, ಸಂಸದರು, ಶಾಸಕರು, ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಹಾಜರಿದ್ದು, ಗೌರವ ಸಲ್ಲಿಸಿದರು. ಬಳಿಕ 3 ಸುತ್ತು ಕುಶಾಲುತೋಪು ಹಾರಿಸಿ, ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಬಳಿಕ ಶ್ರೀಗಳ ಲಿಂಗ ದೇಹದ ಮೇಲೆ ಹೊದಿಸಿದ್ದ ತ್ರಿವರ್ಣ ಧ್ವಜವನ್ನು ಸಿಎಂ ಕುಮಾರಸ್ವಾಮಿ ಅವರು ಕಿರಿಯ ಶ್ರೀಗಳಿಗೆ ಹಸ್ತಾಂತರಿಸಿದರು. ಈ ಮೂಲಕ ಅಧಿಕೃತವಾಗಿ ಶ್ರೀಗಳ ಲಿಂಗಕಾಯವನ್ನು ಮಠಕ್ಕೆ ಹಸ್ತಾಂತರ ಮಾಡಿದರು. ರಾಷ್ಟ್ರಧ್ವಜ ಹೊದಿಸುವಾಗ “ಶ್ರೀಗಳಿಗೆ ಭಾರತರತ್ನ ನೀಡಿ” ಎನ್ನುವ ಘೋಷ ಕೇಳಿಬಂತು.

ಪಂಚ ವಾದ್ಯಗಳ ಮೂಲಕ ಶಿವಯೋಗಿಗಳ ಗದ್ದುಗೆವರೆಗೂ ಮೆರವಣಿಗೆ ಮಾಡಲಾಯಿತು. “ಶಿವಕುಮಾರ ಸ್ವಾಮೀಜಿಗಳಿಗೆ, ನಡೆದಾಡುವ ದೇವರಿಗೆ ಜಯವಾಗಲಿ, ಅನ್ನ ದಾಸೋಹಿಗೆ ಜಯವಾಗಲಿ, ಜ್ಞಾನ ದಾಸೋಹಿಗೆ ಜಯವಾಗಲಿ” ಎಂಬ ಘೋಷ ಕೂಗುತ್ತಾ 3 ಪ್ರದಕ್ಷಿಣೆ ಮಾಡಿದ ಬಳಿಕ ಗದ್ದುಗೆಯ ಸಮಾಧಿ ಸ್ಥಳದಲ್ಲಿ ಐವರು ಸ್ವಾಮೀಜಿಗಳು ಈ ವೇಳೆ ಕ್ರಿಯಾ ವಿಧಿ ವಿಧಾನಗಳನ್ನು ಆರಂಭಿಸಿದರು. ಗದ್ದುಗೆ ಪೂಜೆ ಸ್ಥಳದಲ್ಲಿ ಕ್ರಿಯಾ ಸಮಾಧಿ ಶಾಸ್ತ್ರಗಳು, ಮಂತ್ರ ಪಠಣ ಮೂಲಕ ಕಾರ್ಯ ನಡೆಯಿತು. ಅಟವೀ ಶಿವಯೋಗಿಗಳ ಗದ್ದುಗೆಯ ಅರ್ಚಕರೂ ಕೂಡ ಈ ಪೂಜೆಯಲ್ಲಿ ತೊಡಗಿದ್ದರು. ಬೆಳಗ್ಗೆಯಿಂದಲೇ ನಡೆದ ಪೂಜೆ ಶಾಸ್ತ್ರಗಳನ್ನು ಕಿರಿಯ ಸ್ವಾಮೀಜಿಗಳು ಪೂರ್ಣಗೊಳಿಸಿದರು. ಕ್ರಿಯಾ ಸಮಾಧಿ ವೇಳೆ 10 ರಿಂದ 11 ಸಾವಿರ ವಿಭೂತಿ ಗಟ್ಟಿ, 20 ಚೀಲ ಅಂದರೆ 500 ಕೆಜಿ ಉಪ್ಪು, 10 ಚೀಲ ಮರಳು, 1001 ವಿವಿಧ ರೀತಿಯ ಪತ್ರೆಗಳನ್ನು ಬಳಕೆ ಮಾಡಲಾಗಿತ್ತು.

ಕ್ರಿಯಾ ಸಮಾಧಿ: ವೀರಶೈವ ಲಿಂಗಾಯಿತ ಆಗಮೋಕ್ತ ಕ್ರಿಯಾ ಸಮಾಧಿ ವಿಧಿ ವಿಧಾನಗಳ ಮೂಲಕ ಶ್ರೀಗಳ ಕ್ರಿಯಾ ಸಮಾಧಿಯನ್ನು ಮಾಡಲಾಯಿತು. 9 ಪಾದ ಆಳ, 9 ಪಾದ ಉದ್ದ, 5 ಪಾದ ಅಗಲದಲ್ಲಿ ನಿರ್ಮಾಣವಾಗಿರುವ ಕ್ರಿಯಾ ಸಮಾಧಿಯಲ್ಲಿ 3 ಹಂತಗಳಲ್ಲಿ ಮೆಟ್ಟಿಲು (ಸೋಪನ) ನಿರ್ಮಾಣ ಮಾಡಲಾಗಿರುತ್ತದೆ. ಶ್ರೀಗಳ ಪಾರ್ಥಿವ ಶರೀರವನ್ನು ಕೂರಿಸಲು ಆದರೊಳಗೆ ತ್ರಿಕೋನಾಕೃತಿಯಲ್ಲಿ ಗೂಡು ನಿರ್ಮಿಸಲಾಗಿತ್ತು. ಇದರಲ್ಲಿ ಶ್ರೀಗಳ ಐಕ್ಯವನ್ನಿಟ್ಟು, ವಿಭೂತಿ, ಪತ್ರೆ, ಉಪ್ಪು ಸೇರಿದಂತೆ ವಿವಿಧ ಬಿಲ್ವಪತ್ರೆಗಳನ್ನ ಕ್ರಿಯಾ ಸಮಾಧಿಯನ್ನು ಮುಚ್ಚಲಾಯಿತು.

ಮೊದಲಿಗೆ ಪಾರ್ಥೀವ ಶರೀರಕ್ಕೆ ನಾಡಿನ ಪುಣ್ಯ ನದಿಗಳಿಂದ ತರಿದ್ದ ಪವಿತ್ರ ತೀರ್ಥದಿಂದ ಅಭಿಷೇಕ ನೆರವೇರಿಸಿ ಹೊಸ ಕಶಾಯ ವಸ್ತ್ರಗಳನ್ನು ಧಾರಣೆ ಮಾಡಲಾಯಿತು. ಈ ವೇಳೆ ಪಂಚಾಮೃತ ಹಾಗೂ ಪತ್ರೆ ಇಟ್ಟು ಪ್ರತಿ ಸೋಪಾನದಲ್ಲೂ ಅಭಿಷೇಕ ನಡೆಸಲಾಯಿತು.

ಪಾರ್ಥಿವ ಶರೀರವನ್ನು ಗದ್ದುಗೆಯ ಒಳಭಾಗದ ಗೂಡಿನಲ್ಲಿ ಪದ್ಮಾಸನ ಸ್ಥಿತಿಯಲ್ಲಿ ಕೂರಿಸಿ, ಕೈಗೆ ಇಷ್ಟ ಲಿಂಗವನ್ನು ನೀಡಲಾಯಿತು. ನಂತರ ರುದ್ರ ಚಮಕ ಪಠಣ ಮಾಡುತ್ತಾ ಪಾರ್ಥೀವ ಶರೀರಕ್ಕೆ ಪಂಚಾಮೃತಾಭಿಷೇಕ ನೆರವೇರಿಸಲಾಯಿತು. ಈ ವೇಳೆ ಶ್ರೀಗಳಿಗೆ ಮಹಾ ಮಂಗಳಾರತಿ ಹಾಗೂ ತಂಬಿಟ್ಟು, ಚಿಗಲಿ ಹಾಗೂ ಹಸಿ ಕಡಲೆಕಾಳು ನೈವೇದ್ಯ ನೆರವೇರಿಸಲಾಯಿತು. ಕೆಳ ಭಾಗದಲ್ಲಿ ಉಪ್ಪು, ಮೆಣಸು ನಂತರ ವಿಭೂತಿ ಗಟ್ಟಿಗಳಿಂದ ಲಿಂಗ ಶರೀರವನ್ನು ಮುಚ್ಚಲಾಯಿತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *