Connect with us

Cinema

ವಕೀಲ್‌ ಸಾಬ್‌ಗೆ ಜೊತೆಯಾಗಲಿದ್ದಾರೆ ಶೃತಿ ಹಾಸನ್

Published

on

ಹೈದರಾಬಾದ್: ಪವರ್ ಸ್ಟಾರ್ ಪವನ್ ಕಲ್ಯಾಣ್ ರಾಜಕೀಯದ ನಡುವೆಯೇ ಸಿನಿಮಾಗಳತ್ತ ಮತ್ತೆ ಒಲವು ತೋರಿದ್ದು, ಹಿಂದಿಯ ಪಿಂಕ್ ಚಿತ್ರದ ರೀಮೇಕ್‍ನಲ್ಲಿ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಟಾಲಿವುಡ್‍ಗೆ ಮತ್ತೆ ಕಂಬ್ಯಾಕ್ ಆಗಿದ್ದು, ವೇಣು ಶ್ರೀರಾಮ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರವೇನೋ ಸೆಟ್ಟೇರಿದೆ. ಆದರೆ ಪವನ್‍ಗೆ ಜೋಡಿ ಯಾರಾಗಲಿದ್ದಾರೆ ಎಂಬ ಚರ್ಚೆ ನಡೆದಿತ್ತು. ಇದಕ್ಕೆ ಇದೀಗ ಉತ್ತರ ಸಿಕ್ಕಿದೆ.

ಕೊರೊನಾ ಭೀತಿಯಿಂದಾಗಿ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ಆದರೆ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಆರಂಭದಲ್ಲಿ ಲಾವಣ್ಯ ತ್ರಿಪಾಠಿ, ಇಲಿಯಾನಾ ಹಾಗೂ ಪೂಜಾ ಹೆಗಡೆ ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುತ್ತೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಇದೀಗ ಪವನ್ ಕಲ್ಯಾಣ್‍ಗೆ ನಿರ್ದೇಶಕ ವೇಣು ಶ್ರೀರಾಮ್ ಜೋಡಿಯನ್ನು ಹುಡುಕಿದ್ದು, ಶೃತಿ ಹಾಸನ್ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಥೆಯನ್ನು ಕೇಳಿದ ನಂತರ ಶೃತಿ ಹಾಸನ್ ನಟಿಸುವುಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಚಿತ್ರದ ಶೂಟಿಂಗ್‍ಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಕೊರೊನಾ ಭೀತಿ ಇರುವುದರಿಂದ ಸದ್ಯಕ್ಕೆ ಶೂಟಿಂಗ್‍ಗೆ ಬ್ರೇಕ್ ನೀಡಲಾಗಿದೆ. ಪರಿಸ್ಥಿತಿ ತಿಳಿಯಾದ ಬಳಿಕ ಶೂಟಿಂಗ್ ಶೆಡ್ಯೂಲ್ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.

ತಮಿಳಿನ ನೇರ್ಕೋಂಡಾ ಪಾರ್ವೈ ಸಿನಿಮಾವನ್ನು ಸ್ವಲ್ಪ ಬದಲಾಯಿಸಿ ಎಚ್.ವಿನೂತ್ ಹಿಂದಿಯಲ್ಲಿ ರೀಮೇಕ್ ಮಾಡಿದ್ದರು. ಇದೀಗ ಪಿಂಕ್ ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಪವನ್ ಕಲ್ಯಾಣ್ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶೃತಿಯವರು ಕೆಲ ಸೀನ್ ಹಾಗೂ ಒಂದು ಹಾಡಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ.

ಶೃತಿ ಹಾಗೂ ಪವನ್ ಕಲ್ಯಾಣ್ ಈ ಹಿಂದೆ ಗಬ್ಬರ್ ಸಿಂಗ್ ಹಾಗೂ ಕಾಟಮರಾಯುಡು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದು, ಇದೀಗ ಮೂರನೇ ಬಾರಿಗೆ ಈ ಜೋಡಿ ಒಂದಾಗುತ್ತಿದೆ. ಸಿನಿಮಾದಲ್ಲಿ ಮಹಿಳೆಯರ ಭದ್ರತೆ ಕುರಿತು ಚಿತ್ರಿಸಲಾಗಿದೆಯಂತೆ. ಹಿಂದಿಯ ರೀಮೇಕ್ ಆಗಿದ್ದರೂ ತೆಲುಗಿನಲ್ಲಿ ಯಾವ ರೀತಿ ಮೂಡಿ ಬರಲಿದೆ ಎಂಬುದು ಪ್ರೇಕ್ಷಕರ ಕುತೂಹಲವಾಗಿದೆ.