Wednesday, 22nd January 2020

ಏರ್ ಶೋ ಬೆಂಕಿ ಅವಘಡಕ್ಕೂ ಪುಲ್ವಾಮಾ ದಾಳಿಗೂ ಲಿಂಕ್ ಇದೆಯಾ – ಘಟನೆಯನ್ನು ರಾಜಕೀಯಗೊಳಿಸಿದ್ರಾ ಕರಂದ್ಲಾಜೆ?

– ರಾಜ್ಯ ಸರ್ಕಾರ ರಕ್ಷಣೆ ನೀಡಬೇಕಿತ್ತು
– ದೇಶದ್ರೋಹಿಗಳು ಕೃತ್ಯ ಎಸಗಿದ್ರಾ?
– ರಾಜ್ಯ, ಕೇಂದ್ರದಿಂದ ಜಂಟಿ ತನಿಖೆಗೆ ಆಗ್ರಹ

ಉಡುಪಿ: ಬೆಂಗಳೂರಿನ ಏರ್ ಶೋ ದುರಂತಕ್ಕೆ ದೇಶದ್ರೋಹಿ ಲಿಂಕ್ ಇದ್ಯಾ? ಇದೂ ಒಂಥರಾ ಕಾಶ್ಮೀರದ ಪುಲ್ವಾಮಾ ದಾಳಿಯ ಮುಂದುವರಿದ ಭಾಗನಾ? ದೇಶದ್ರೋಹಿಗಳು ಈ ಕೃತ್ಯದಲ್ಲಿ ತೊಡಗಿರಬಹುದಾ? ಇಂತದ್ದೊಂದು ಸಂಶಯವನ್ನು ಸಂಸದೆ ಶೋಭಾ ಕರಂದ್ಲಾಜೆ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶೋಭಾ ಕರಂದ್ಲಾಜೆ, ಬೆಂಗಳೂರು ಏರ್ ಶೋ ಸಂದರ್ಭದ ಬೆಂಕಿ ಅನಾಹುತದ ಬಗ್ಗೆ ಎಲ್ಲಾ ಆಯಾಮದಲ್ಲಿ ಉನ್ನತಮಟ್ಟದ ತನಿಖೆಯಾಗಬೇಕು. ಏರ್ ಶೋ ಕೇಂದ್ರ ಸರ್ಕಾರ, ಕೇಂದ್ರದ ವಿವಿಧ ಇಲಾಖೆಯ ಆಯೋಜನೆಯಾಗಿತ್ತು. ಕಾರ್ಯಕ್ರಮಕ್ಕೆ ಸಂಪೂರ್ಣ ರಕ್ಷಣೆ ಕೊಡಬೇಕಾದದ್ದು ರಾಜ್ಯ ಸರ್ಕಾರದ ಜವಾಬ್ದಾರಿ. ಏರ್ ಶೋಗೆ ದೇಶ ವಿದೇಶದಿಂದ ಜನ ಬಂದಿದ್ದಾರೆ. ಬಹಳ ಜನ ಪೈಲೆಟ್ ಗಳು ವಿವಿಐಪಿಗಳು ಬಂದಿದ್ದರು. ಈ ನಡುವೆ ರಾಜ್ಯ ಸರ್ಕಾರದ ಬೇಜವಾಬ್ದಾರಿ ವರ್ತನೆ ತೋರಿದಿದೆ ಎಂದು ಆಕ್ರೋಶ ಹೊರಹಾಕಿದರು.

ಏರ್ ಶೋ ಬೆಂಕಿ ಅವಘಡದಲ್ಲಿ ಏನು ಒಂದು ಸಂಶಯ ಕಾಡುತ್ತಿದೆ. ಇಷ್ಟೊಂದು ವಾಹನಗಳು ಸುಡಬೇಕು ಅಂದ್ರೆ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಘಟನೆಗೂ ಇದಕ್ಕೂ ಸಂಬಂಧವಿದೆಯಾ ಎಂಬುದರ ಬಗ್ಗೆ ತನಿಖೆ ನಡೆಯಬೇಕಿದೆ. ಯಾರಾದರೂ ದೇಶದ್ರೋಹಿಗಳು ಈ ಕೆಲಸವನ್ನು ಮಾಡಿದ್ರಾ ಅಥವಾ ಆಕಸ್ಮಿಕ ಬೆಂಕಿ ಅವಘಡನಾ ಎಂಬುದರ ಬಗ್ಗೆ ಸೂಕ್ತ ತನಿಖೆಯ ಅವಶ್ಯಕತೆಯಿದೆ. ರಾಜ್ಯ ಸರ್ಕಾರ ತನ್ನ ತಪ್ಪಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಂಕಿ ಅವಘಡದಲ್ಲಿ 300 ಜನರು ಕಾರು ಕಳೆದುಕೊಂಡಿದ್ದಾರೆ. ಹಲವರು ಕಾರಿನಲ್ಲಿ ಇರಿಸಿದ ದಾಖಲೆಗಳು ಕಳೆದುಕೊಂಡಿದ್ದು, ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ತನಿಖೆ ನಡೆಸಬೇಕೆಂದು ಶೋಭಾ ಕರಂದ್ಲಾಜೆ ಅಗ್ರಹಿಸಿದರು.

ಏರ್ ಶೋ ಶಿಫ್ಟ್ ಆಗುವಾಗ ನಾವು ಧನಿ ಎತ್ತಿದ್ದೆವು. ಮತ್ತೆ ಕರ್ನಾಟಕಕ್ಕೆ ಅದನ್ನು ತಂದಿದ್ದೇವೆ. ಇಂತಹ ಘಟನೆ ನಮಗೆ ಶೋಭೆ ತರುವುದಿಲ್ಲ. ರಾಜ್ಯ ಸರ್ಕಾರ ತನ್ನ ತಪ್ಪನ್ನು ಬೇರೆಯವರ ಮೇಲೆ ಹೊರಿಸುತ್ತಿದೆ. ರಕ್ಷಣೆ ಕೊಡಲು ಆಗುದಿಲ್ಲ ಅಂದರೆ ಏನರ್ಥ? ರಾಜ್ಯ ಪೊಲೀಸ್, ಅಗ್ನಿಶಾಮಕ ಇಲಾಖೆ ಏನು ಮಾಡುತ್ತಿತ್ತು.? ಎಂದು ಸಂಸದೆ ಶೋಭಾ ಕರಂದ್ಲಾಜೆ ಸಾಲು ಸಾಲು ಪ್ರಶ್ನೆಗಳನ್ನು ಮಾಡಿದ್ದಾರೆ.

ಕಾರು ನಿಲ್ಲಿಸಿದ ಜಾಗದಲ್ಲಿ ಪೊಲೀಸರಿಲ್ಲ, ಅಗ್ನಿಶಾಮಕದಳದ ಸಿಬ್ಬಂದಿ ಇರಲಿಲ್ಲ. ಪಾರ್ಕಿಂಗ್ ಜಾಗದಲ್ಲಿ ಯಾವುದೇ ರಕ್ಷಣಾ ವ್ಯವಸ್ಥೆ ಮಾಡಿರಲಿಲ್ಲ. ಕರ್ನಾಟಕದ ರಕ್ಷಣಾ ಇಲಾಖೆಯ ಜವಾಬ್ದಾರಿಯನ್ನು ಮರೆತಿದೆ. ಏರ್ ಶೋ ಬೆಂಗಳೂರಿನಲ್ಲಿಯೇ ನಡೆಯಬೇಕೆಂದು ಸಿಎಂ ಸೇರಿದಂತೆ ಎಲ್ಲರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಮಾತನಾಡಿ ಬೆಂಗಳೂರಿನಲ್ಲಿ ನಡೆಸುವಂತೆ ಮನವಿ ಮಾಡಿಕೊಳ್ಳುತ್ತೇವೆ. ನಮಗೆ ಬೇಕು ಎಂದು ಏರ್ ಶೋ ತಂದಾಗ ರಕ್ಷಣೆ ನೀಡಬೇಕಾದ ರಾಜ್ಯ ಸರ್ಕಾರ ಭದ್ರತೆ ನೀಡುವಲ್ಲಿ ವಿಫಲವಾಗಿದೆ ಎಂದು ನಾನು ನಿನ್ನೆಯೇ ಟ್ವೀಟ್ ಮಾಡಿದ್ದೇನೆ ಎಂದು ಕರಂದ್ಲಾಜೆ ತಿಳಿಸಿದರು.

ಶೋಭಾ ಕರಂದ್ಲಾಜೆ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ಅಭಿಪ್ರಾಯ ತಿಳಿಸಿ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *